ಪ್ರಿಯ ಸ್ನೇಹಿತರೇ, ನಮ್ಮ ಪ್ರಜಾಪ್ರಭುತ್ವದ ತಳಹದಿ ಕುಸಿಯುತ್ತಿರುವಾಗ ಈ ವೃತ್ತಿಯಲ್ಲಿ ಇರಲು ಇಷ್ಟವಾಗುತ್ತಿಲ್ಲ: ದ ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆಯ ಪೂರ್ಣ ಪಾಠ

0
1151

ಸನ್ಮಾರ್ಗ ವಾರ್ತೆ-

ಮಂಗಳೂರು: ಸೆ.6- ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂತಿಲ್ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದು, ಆ ರಾಜೀನಾಮೆ ಪತ್ರದ ಪೂರ್ಣ ಪಾಠ ಹೀಗಿದೆ.

ಪ್ರಿಯ ಸ್ನೇಹಿತರೇ,

ನಾನು ಇಂದು ನನ್ನ ಭಾರತೀಯ ಆಡಳಿತಾತ್ಮಕ ಸೇವೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ನನ್ನ ರಾಜೀನಾಮೆಗೆ ವೈಯಕ್ತಿಕ ಕಾರಣಗಳಿವೆಯೇ ಹೊರತು ಯಾವುದೇ ವೈಮನಸ್ಸಿಲ್ಲ. ನನ್ನ ಸದ್ಯದ ಮಂಗಳೂರು ಡಿಸಿ ಪೋಸ್ಟ್​ಗೂ ರಾಜೀನಾಮೆಗೂ ಸಂಬಂಧವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನ ಮತ್ತು ಅಧಿಕಾರಿಗಳಿಗೆ ನಾನು ಈ ಸಂದರ್ಭದಲ್ಲಿ ಕ್ಷಮೆ ಕೋರಲು ಇಚ್ಚಿಸುತ್ತೇನೆ. ಅವರ ಜತೆ ಕೆಲಸ ಮಾಡಿದ್ದು ಅವಿಸ್ಮರಣೀಯ. ಅರ್ಧದಲ್ಲೇ ರಾಜೀನಾಮೆ ನೀಡಿ ಹೋಗುತ್ತಿರುವುದಕ್ಕೆ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ.

ದೇಶದ ಸಂವಿಧಾನದ ಮೂಲ ಆಶಯಗಳು ಹಾದಿ ತಪ್ಪುತ್ತಿರುವ ಈ ದಿನಗಳಲ್ಲಿ ನಾನು ಭಾರತೀಯ ಆಡಳಿತಾತ್ಮಕ ಸೇವೆಯಲ್ಲಿ ಮುಂದುವರೆಯುವುದು ನನಗೆ ಸಮಂಜಸವೆನಿಸುತ್ತಿಲ್ಲ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಮ್ಮ ಪ್ರಜಾಪ್ರಭುತ್ವದ ತಳಹದಿ ಕುಸಿಯುತ್ತಿರುವಾಗ ನೈತಿಕವಾಗಿ ನನಗೆ ಈ ವೃತ್ತಿಯಲ್ಲಿ ಇರಲು ಇಷ್ಟವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ವಿಷಮಯ ಸ್ಥಿತಿ ಇನ್ನಷ್ಟು ಉಲ್ಬಣವಾಗಲಿದೆ. ನಾನು ಐಎಎಸ್​ ವೃತ್ತಿಯ ಆಚೆಗಿದ್ದರೆ ದೇಶದ ಅಭಿವೃದ್ಧಿಗಾಗಿ, ಜನರಿಗಾಗಿ ಇನ್ನಷ್ಟು ಹೆಚ್ಚು ಕೆಲಸ ಮಾಡಬಹುದು. ಎಲ್ಲಾ ಅದರ ಪಾಡಿಗೆ ಆಗಲಿ ಎಂದು ಸುಮ್ಮನಾಗಲು ಇನ್ನು ಸಾಧ್ಯವಿಲ್ಲ.

ಇನ್ನೊಮ್ಮೆ ನನ್ನ ಜತೆ ಕೆಲಸ ಮಾಡಿದ ಎಲ್ಲರಿಗೂ, ರಾಜ್ಯದ ಜನರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ನನ್ನ ಸಹೋದ್ಯೋಗಿಗಳು ಮತ್ತು ಅವರ ಕುಟುಂಬಸ್ಥರು ಸಂತಸದಿಂದಿರಲಿ ಎಂದು ಆಶಯಿಸುತ್ತೇನೆ.

ಎಸ್​. ಸಸಿಕಾಂತ್​ ಸೆಂತಿಲ್