ತಬ್ರೇಜ್ ನ ಸಾವಿಗೆ ಹೃದಯಾಘಾತ ಕಾರಣ ಎಂದ ಪೊಲೀಸರು: ಹೈಕೋರ್ಟ್ ಗೆ ಹೋಗುವೆ ಎಂದ ನ್ಯಾಯವಾದಿ- ದ ಕ್ವಿಂಟ್ ತನಿಖಾ ವರದಿ

0
2638

ಸನ್ಮಾರ್ಗ ವಾರ್ತೆ-

ರಾಂಚಿ, ಸೆ.9- ಝಾರ್ಖಂಡ್ ನ ತಬ್ರೇಜ್ ಅನ್ಸಾರಿ ಹತ್ಯಾ ಪ್ರಕರಣವು ತಿರುವನ್ನು ಪಡೆದುಕೊಂಡಿದ್ದು, ಆ ಪ್ರಕರಣವನ್ನು ದುರ್ಬಲಗೊಳಿಸಲು ಸರಕಾರ ಸಂಚು ಹೂಡಿದೆಯೇ ಎಂಬ ಸಂಶಯ ಬಲವಾಗಿ ಕೇಳಿಬರುತ್ತಿದೆ.The Quint ಜಾಲತಾಣವು ಈ ಬಗ್ಗೆ ವಿಸ್ತೃತವಾದ ತನಿಖಾ ಬರಹವನ್ನು ಪ್ರಕಟಿಸಿದ್ದು, ರಾಜಸ್ತಾನದ ಪೆಹ್ಲೂ ಖಾನ್ ಪ್ರಕರಣದಂತೆ ಈ ಪ್ರಕರಣದಲ್ಲೂ ಅನುಮಾನ ಬಲವಾಗುತ್ತಿದೆ. ಜೂನ್ 17ರಂದು ಜಾರ್ಖಂಡ್ ನಲ್ಲಿ ತಬ್ರೇಜ್ ಅನ್ಸಾರಿಯನ್ನು ಗುಂಪೊಂದು ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿ ಕೊಂದಿತ್ತು. ಇದಾದ ಐದು ದಿನಗಳ ಬಳಿಕ ಆತ ಮೃತಪಟ್ಟಿದ್ದ. ಈ ಬಗ್ಗೆ ಜುಲೈ 29ರಂದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು ವಿಶೇಷ ಏನೆಂದರೆ, ತಬ್ರೇಜ್ ಮೇಲೆ ಹಲ್ಲೆಗೈದವರ ವಿರುದ್ಧ ಕೊಲೆ ಆರೋಪವನ್ನು ಕೈ ಬಿಟ್ಟಿದ್ದಾರೆ. ಇದನ್ನು ಗಮನಿಸಿದ ತಬ್ರೇಜ್ ಪರ ವಕೀಲ ಅಲ್ತಾಫ್ ಹುಸೈನ್ ಅವರು ಆಗಸ್ಟ್ 31ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೂ ಹೀಗೆ ಯಾಕಾಯಿತೆಂಬ ಪ್ರಶ್ನೆ ಬಲವಾಗಿಯೇ ಕೇಳಿಬಂದಿದೆ.

ತಬ್ರೇಜ್ ನನ್ನ ಕೊಂದ ಆರೋಪದಲ್ಲಿ ಬಂದಿತರಾದವರನ್ನು ಪ್ರಕಾಶ್ ಮಂಡಲ್, ಕಮಲ್ ಮಹತೋ, ಸುನಾಮ ಪ್ರಧಾನ್, ಪ್ರೇಮಚಂದ್ರ ಮಹಾಲಿ, ಸುಮಂತ್ ಮಹತೋ, ಮದನ್ ನಾಯಕ್, ಚಾಮು ನಾಯಕ್, ಮಹೇಶ್ ಮಹಲಿ, ಕುಶಲ್ ಮಹಲಿ, ಸತ್ಯನಾರಾಯಣ್ ನಾಯಕ್ ಹಾಗೂ ಭೀಮ್ ಸೇನ್ ಮಂಡಲ್ ಎಂದು ಗುರುತಿಸಲಾಗಿದೆ.

“ತಬ್ರೇಝ್ ದಿಢೀರ್ ಹೃದಯ ಸ್ಥಂಭನದಿಂದ ಮೃತಪಟ್ಟಿದ್ದಾನೆಂಬ ಅಧಿಕಾರಿಗಳ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಆತನ ತಲೆಯಲ್ಲಿ ಗಾಯವಿತ್ತು ಮತ್ತು ತಲೆಬುರುಡೆ ಒಡೆದಿತ್ತು ಎಂದು ನ್ಯಾಯವಾದಿ ಅಲ್ತಾಫ್ ಹೇಳಿದ್ದಾರೆ.

ಈ ಪ್ರಕರಣದ ತನಿಖಾ ಅಧಿಕಾರಿ ಆರ್. ನಾರಾಯಣ್ ಅವರೊಂದಿಗೆ ಕ್ವಿಂಟ್ ಮಾತನಾಡಿದ್ದು, ಸಾವಿಗೆ ಕಾರಣವೆಂದರೆ ಹಠಾತ್ ಹೃದಯ ಸ್ತಂಭನವಾಗಿದೆ ಎಂದವರು ಹೇಳಿದ್ದಾರೆ. ಇದನ್ನು ಇಬ್ಬರು ವೈದ್ಯರು ದೃಢೀಕರಿಸಿದ್ದಾರೆ ಎಂದು ಅವರು ಹೇಳಿದರು.

ಮಾನವ ಹಕ್ಕುಗಳ ಕಾನೂನು ನೆಟ್‌ವರ್ಕ್ ವಕೀಲ ಅಮನ್ ಖಾನ್ ಅವರನ್ನು ಕ್ವಿಂಟ್ ಸಂಪರ್ಕಿಸಿದಾಗ, ಇದು ಸರಿಯಲ್ಲ ಎಂದು ಅವರು ಹೇಳಿದರು. “ಸಾವಿಗೆ ಆಗಾಗ್ಗೆ ಆಘಾತ ಹೃದಯ ಸ್ತಂಭನ ಕಾರಣ ಎಂಬುದನ್ನು ಒಪ್ಪಲಾಗದು. ಹೃದಯ ಸ್ತಂಭನವು ಸಂಪೂರ್ಣವಾಗಿ ನಿರ್ಣಾಯಕವಲ್ಲ ಮತ್ತು ಕೇವಲ ಸೆಕ್ಷನ್ 302 ಅನ್ನು ತೆಗೆದುಹಾಕಲು ಪೊಲೀಸರಿಗೆ ಯಾವುದೇ ಆಧಾರವನ್ನು ಇದು ಒದಗಿಸುವುದಿಲ್ಲ ಎಂದಿದ್ದಾರೆ.

ತಬ್ರೇಝ್ ಸಾವಿನ ಕಾರಣ ತಿಳಿಯಲು ರಚಿಸಲಾಗಿದ್ದ ಜಿಲ್ಲಾಧಿಕಾರಿ ಅಂಜನೇಯುಲು ದೊಡ್ಡೆ ನೇತೃತ್ವದ ತ್ರಿಸದಸ್ಯ ತಂಡವು ತಬ್ರೇಝ್ ಸಾವಿಗೆ ಪೊಲೀಸರು ಹಾಗೂ ವೈದ್ಯರನ್ನು ಹೊಣೆಯಾಗಿಸಿದೆ. “ಪೊಲೀಸರು ಸ್ಥಳಕ್ಕೆ ತಡವಾಗಿ ಆಗಮಿಸಿದ್ದಾರೆ ಮತ್ತು ವೈದ್ಯರು ಆತನ ತಲೆಬುರುಡೆಗಾದ ಗಾಯವನ್ನು ಸರಿಯಾಗಿ ಗುರುತಿಸಿರಲಿಲ್ಲ” ಎಂದು ದೊಡ್ಡೆ ನೇತೃತ್ವದ ತಂಡ ಜುಲೈ 12ರಂದು ನೀಡಿದ ವರದಿಯಲ್ಲಿ ತಿಳಿಸಿತ್ತು.

ಆದರೆ ವ್ಯಾಪಕ ಟೀಕೆಗೆ ಪ್ರತಿಕ್ರಿಯಿಸಿದ ಪೊಲೀಸಧಿಕಾರಿ ನಾರಾಯಣ್, “ನಾವು ತಬ್ರೇಜ್ ನನ್ನ ಸರೈಕೆಲಾದ ಸದರ್ ಆಸ್ಪತ್ರೆಗೆ ಕರೆದೊಯ್ಯಿದ್ದೇವೆ, ಅವರ ಸ್ಥಿತಿ ಗಂಭೀರವಾಗಿರಲಿಲ್ಲ ಮತ್ತು ಅವರು ಸಾಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಹೌದು, ಅವರ ಸಿಟಿ ಸ್ಕ್ಯಾನ್ ಆಗಲಿಲ್ಲ, ಆದರೆ ನಾವು ದೆಹಲಿಯಲ್ಲಿ ಅಂತಹ ಸೌಲಭ್ಯಗಳು ಸುಲಭವಾಗಿ ಲಭ್ಯವಿವೆ, ಇಲ್ಲಿಲ್ಲ. ಅಲ್ಲದೆ ತಬ್ರೇಜ್ ಗೆ ವಾಂತಿ ಅಥವಾ ಯಾವುದೂ ಆಗಿರಲಿಲ್ಲ ಎಂದು ಹೇಳಿದ್ದಾರೆ.

ಪೊಲೀಸರು ಆರೋಪಿಗಳನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿರುವ ವಕೀಲ ಅಲ್ತಾಫ್ ಅವರು ನಾವು ಚಾರ್ಜ್ ಶೀಟ್ ನ ವಿರುದ್ಧ ಕೋರ್ಟಿನಲ್ಲಿ ದೂರು ದಾಖಲಿಸುತ್ತೇವೆ. ಒಂದುವೇಳೆ, ಕೋರ್ಟು ನಮ್ಮ ವಾದವನ್ನು ಒಪ್ಪಿಕೊಳ್ಳದಿದ್ದರೆ, ನಾವು ಹೈಕೋರ್ಟಿಗೆ ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ.

ತನ್ನ ಪತಿ ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ತನ್ನ ಹೆತ್ತವರ ಮನೆಗೆ ಶಹಿಸ್ತಾ ಮರಳಿದ್ದು, ಪತಿಯ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಹೋರಾಟದಲ್ಲಿ ನಿರತರಾಗಿದ್ದಾರೆ. ತನ್ನ ಪತಿಯ ಮಾವ ಮಸೂರ್ ಜತೆ ಆಗಾಗ ನ್ಯಾಯಾಲಯಕ್ಕೆ ಹಾಗೂ ಪೊಲೀಸ್ ಠಾಣೆಗೆ ಅಲೆದಾಡುತ್ತಾ ಪತಿಯ ಸಾವಿಗೆ ನ್ಯಾಯಕ್ಕಾಗಿ ಮೊರೆಯಿಡುತ್ತಿದ್ದಾರೆ. ಶಹಿಸ್ತಾ ಏಪ್ರಿಲ್ ೨೭ ರಂದು ತಬ್ರೇಜ್ ನನ್ನ ವರಿಸಿದ್ದು, ಇದಾಗಿ ಎರಡು ತಿಂಗಳ ಬಳಿಕ ತಬ್ರೇಜ್ ನ ಹತ್ಯೆಯಾಗಿತ್ತು. ಹತ್ಯೆಯ ಎರಡು ದಿನಗಳ ಬಳಿಕ ಆಕೆ ಗರ್ಭವತಿಯಾಗಿರುವುದು ತಿಳಿದುಬಂತು ಮತ್ತು ಹತ್ಯೆಯ ಆಘಾತದಿಂದಾಗಿ ಗರ್ಭಪಾತವಾಯಿತು.