ಸನ್ಮಾರ್ಗ ವಾರ್ತೆ
ಬೆಂಗಳೂರು,ಸೆ.11: ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಪ್ರತಿಭಟಿಸಿ ಐಎಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಸ್. ಸಸಿಕಾಂತ್ ಸೆಂಥಿಲ್ ವಿರುದ್ಧ ಬಿಜೆಪಿ ಸಂಸದ ಅನಂತ್ಕುಮಾರ್ ಹೆಗಡೆ ಕಟು ಟೀಕೆ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಹೋಗಿ ಭಾರತ ವಿರುದ್ಧ ಹೋರಾಡಿ ಎಂದು ಮಾಜಿ ಕೇಂದ್ರ ಸಚಿವರು ಕೂಡ ಆಗಿರುವ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕನ ಹೇಳಿಕೆ ಅವರ ನಿಜ ಬಣ್ಣವನ್ನು ಬಹಿರಂಗಗೊಳಿಸಿದೆ ಎಂದು ಸಸಿಕಾಂತ್ ಸೆಂಥಿಲ್ ಪ್ರತಿಕ್ರಿಯಿಸಿದರು.
ದೇಶಪ್ರೇಮದ ಹೆಸರಿನಲ್ಲಿ ಕೇಂದ್ರ ಸರಕಾರ ಜನವಿರೋಧಿ ನೀತಿ ಜಾರಿಗೊಳಿಸುತ್ತಿದೆ. ಜನರ ನಡುವೆ ಒಡಕು ಸೃಷ್ಟಿಸುತ್ತಿದೆ ಎಂದು ಬೆಟ್ಟು ಮಾಡಿ ಸಸಿಕಾಂತ್ ಸೆಂಥಿಲ್ ಕಳೆದ ಶುಕ್ರವಾರ ರಾಜೀನಾಮೆ ನೀಡಿದ್ದರು.
“ಇಲ್ಲಿ ಬದುಕಿ ತಮ್ಮ ಅಭಿಪ್ರಾಯಗಳಿಂದ ಜನರಲ್ಲಿ ಒಡಕು ಸೃಷ್ಟಿಸುವ ಬದಲು ಅವರನ್ನು ಬೆಂಬಲಿಸುವವರ ಜೊತೆ ಪಾಕಿಸ್ತಾನಕ್ಕೆ ಹೋಗಲಿ. ಭಾರತದ ವಿರುದ್ಧ ಹೋರಾಡಲು ಅವರಿಗೆ ಇರುವ ಸುಲಭ ಮಾರ್ಗ ಅದು. ಕೇಂದ್ರದಲ್ಲಿ ಪ್ಯಾಸಿಸ್ಟ್ ಸರಕಾರ ಇದೆ ಎನ್ನುವುದು ಅವರ ಅಭಿಪ್ರಾಯವಾದರೆ, ಅವರನ್ನು ‘ದೇಶದ್ರೋಹಿ’ ಎಂದು ಕರೆಯುವ ಸ್ವಾತಂತ್ರ್ಯ ತಮಗೆ ಇದೆ” ಎಂದು ಹೆಗಡೆ ಟ್ವೀಟ್ ಮಾಡಿದ್ದಾರೆ.












