ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.11: ಭೀಮಾ ಕೊರೆಗಾಂವ್ ಪ್ರಕರಣ ತನಿಖೆ ನಡೆಸುತ್ತಿರುವ ಪುಣೆ ಪೊಲೀಸರು ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಹನಿ ಬಾಬುರವರ ಮನೆಗೆ ದಾಳಿ ಮಾಡಿ ಶೋಧ ನಡೆಸಿದ್ದಾರೆ. ನೊಯಿಡಾದ ಮನೆಯಲ್ಲಿ ಸರ್ಚ್ ವಾರಂಟ್ ಕೂಡ ಇಲ್ಲದೆ ಬಂದ ಪೊಲೀಸರು ಹನಿ ಬಾಬು ಮತ್ತು ಜೆನ್ನಿ ರೊವೆನಾರನ್ನು ಆರು ಗಂಟೆಗಳ ಕಾಲ ಬಂಧಿಯಾಗಿರಿಸಿ ಶೋಧ ನಡೆಸಿದರು. ಹನಿ ಬಾಬುರ ಮೊಬೈಲ್, ಲ್ಯಾಪ್‍ಟಾಪ್, ಪೆನ್‍ಡ್ರೈವ್ ಹಾಗೂ ಕೆಲವು ಪುಸ್ತಕಗಳನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ.
ಪ್ರೊ.ಹನಿ ಬಾಬು ದಿಲ್ಲಿ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದು ಜೆನ್ನಿ ರೊವೆನಾ ಮಿರಾಂಡ್ ಹೌಸ್‍ನ ಇಂಗ್ಲಿಷ್ ವಿಭಾಗದಲ್ಲಿ ಕೆಲಸದಲ್ಲಿದ್ದಾರೆ. ನೊಯಿಡಾ ಪೊಲೀಸರನ್ನು ಕರೆದುಕೊಂಡು ಆರೂವರೆ ಗಂಟೆಗೆ ಬಂದ ಪುಣೆ ಪೊಲೀಸರ ತಂಡ ಮಧ್ಯಾಹ್ನ ಹನ್ನೆರಡು ಗಂಟೆವರೆಗೆ ಶೋಧ ನಡೆಸಿತು. ಈ ಕುರಿತು ತಮಗೆ ಯಾವ ವಿವರವೂ ಇರಲಿಲ್ಲ ಎಂದು ಜೆನ್ನಿ ತಿಳಿಸಿದ್ದಾರೆ.
ಕೇರಳದ ರೋನಾ ವಿಲ್ಸನ್‍ರ ಪ್ರಕರಣಕ್ಕೆ ಸಂಬಧಿಸಿ ನಾವು ಬಂದಿದ್ದೇವೆ ಎಂದು ಪುಣೆ ಪೊಲೀಸರು ಮೊದಲು ಹೇಳಿದಾಗ ವಾರಂಟ್ ಕೇಳಿದೆವು. “ವಾರಂಟ್ ಇಲ್ಲದೆ ದಾಳಿ ಮಾಡುವಂತಿಲ್ಲವಲ್ಲ” ಎಂದು ನಾವು ಹೇಳಿದೆವು. ಆದರೆ ಪೊಲೀಸ್ ಕಮಿಶನರ್ ಶಿವಾಜಿ ಪವಾರ್ ನೇತೃತ್ವದ ಪೊಲೀಸರ ತಂಡ ಮನೆಯಲ್ಲಿ ಶೋಧ ನಡೆಸಿದೆ ಎಂದು ಜೆನ್ನಿ ರೊವೆನಾ ತಿಳಿಸಿದ್ದಾರೆ.
ನಂತರ ಗೆಳೆಯರಿಗೆ ಫೋನ್ ಮಾಡಲು ಹೋದಾಗ ತನ್ನ ಕೈಯಲ್ಲಿದ್ದ ಮೊಬೈಲ್ ಫೋನ್ ಕಿತ್ತು ಕೊಂಡರು ಆರು ಗಂಟೆಗಳ ಕಾಲ ಯಾರಿಗೂ ಫೋನ್ ಮಾಡಲು ಬಿಡಲಿಲ್ಲ ಎಂದು ದಂಪತಿ ತಿಳಿಸಿದ್ದಾರೆ. ಸರ್ಚ್ ವಾರಂಟ್ ಇಲ್ಲದೆ ದಾಳಿ ಮಾಡಿರುವುದನ್ನು ದಿಲ್ಲಿ ವಿಶ್ವವಿದ್ಯಾನಿಲಯದ ಟೀಚರ್ಸ್ ಅಸೋಸಿಯೇಶನ್ ಖಂಡಿಸಿದೆ.












