ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.18: ಜಮ್ಮು-ಕಾಶ್ಮೀರದ ಸ್ಥಿತಿಗತಿಗಳು ಗಂಭೀರವಾಗಿದೆ. ತನಗೆ ಸ್ವಾತಂತ್ರ್ಯ ಅನುಭವಿಸಲು ಅವಕಾಶ ಮಾಡಿಕೊಟ್ಟ ಸುಪ್ರೀಂಕೋರ್ಟಿಗೆ ಕೃತಜ್ಞತೆಗಳು ಎಂದು ಸಿಪಿಎಂ ನಾಯಕ ಮುಹಮ್ಮದ ಯೂಸುಫ್ ತರಿಗಾಮಿ ಹೇಳಿದರು.
ಹೊಸದಿಲ್ಲಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತಾಡುತ್ತಿದ್ದರು. ನಾನು ವಿದೇಶಿಯಲ್ಲ, ಫಾರೂಕ್ ಅಬ್ದುಲ್ಲ ಮತ್ತು ಇತರ ನಾಯಕರು ಭಯೋತ್ಪಾದಕರೂ ಅಲ್ಲ. ಕಾಶ್ಮೀರಿ ಜನರಿಂದ ಅಲ್ಲಿ ಪರಿಸ್ಥಿತಿ ಕೆಟ್ಟು ಹೋದದ್ದಲ್ಲ. ರಾಜಕೀಯ ಮತ್ತು ರಾಜಕಾರೀಣಗಳು ಅಲ್ಲಿನ ಪರಿಸ್ಥಿತಿಯನ್ನು ಕೆಡಿಸಿ ಹಾಕಿದರು. ಕಾಶ್ಮೀರದ ಸ್ಥಿತಿ ಗಂಭೀರವಾಗಿದೆ. ಕಾಶ್ಮೀರಿ ಜನರಿಗೆ ನೀಡಿದ ಭರವಸೆಗಳನ್ನು ಉಲ್ಲಂಘಿಸಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸಬೇಕಾದವರು ಅದನ್ನು ನಾಶಪಡಿಸಿದರು. ಕಾಶ್ಮೀರದ ಜನರ ಮಾತನ್ನೂ ಕೇಳಬೇಕಾಗಿತ್ತು. ನಾವು ಸ್ವರ್ಗವನ್ನು ಕೇಳುತ್ತಿಲ್ಲ ಎಂದು ತರಿಗಾಮಿ ಹೇಳಿದರು.
ದಿಲ್ಲಿಯಲ್ಲಿ ಚಿಕಿತ್ಸೆಪಡೆಯುತ್ತಿರುವ ತರಿಗಾಮಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಯೆಚೂರಿಯ ಜೊತೆ ಪತ್ರಿಕಾಗೋಷ್ಠಿಗೆ ಬಂದರು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದು ಪಡಿಸಿದ ನಂತರ ಗೃಹ ಬಂಧನದಲ್ಲಿರಿಸಲಾದ ನಾಯಕರಲ್ಲಿ ತರಿಗಾಮಿ ಕೂಡ ಇದ್ದರು. ವಿವಿಧ ರೋಗಗಳಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗೆ ದಿಲ್ಲಿಗೆ ಕರೆತರಲು ಅನುವು ಮಾಡಿಕೊಡಬೇಕೆಂದು ಸೀತಾರಾಂ ಯೆಚೂರಿ ಸುಪ್ರೀಂಕೋರ್ಟಿನ ಮೊರೆ ಹೋಗಿದ್ದರು. ಈಗ ತರಿಗಾಮಿ ದಿಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












