ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಶನ್‌ನ ಅಧ್ಯಕ್ಷ ಮಿಯಾನ್ ಅಬ್ದುಲ್ ಕಯೂಮ್‌ ಬಂಧನಕ್ಕೆ ಸರಕಾರ ಕೊಟ್ಟ ಕಾರಣ ಗೊತ್ತಾದರೆ ನಿಮಗೂ ಅಚ್ಚರಿಯಾದೀತು

0
629

ಸನ್ಮಾರ್ಗ ವಾರ್ತೆ-

ಜಮ್ಮು ಕಾಶ್ಮೀರ; ಸೆ.28- ಪ್ರತ್ಯೇಕತಾವಾದಿಗಳ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರತ್ಯೇಕತಾವಾದಿಗಳ ಪರ ನೀವು ವಾದಿಸುತ್ತಿರುವುದರಿಂದ ನಿಮ್ಮದು ತೀವ್ರವಾದಿ ಸಿದ್ಧಾಂತವಾಗಿದೆ. ಈ ಮೂಲಕ ಬಾರ್ ಅಸೋಸಿಯೇಷನ್‌ನ ವೇದಿಕೆಯನ್ನು ನೀವು ದುರುಪಯೋಗಪಡಿಸಿಕೊಂಡಿದ್ದೀರಿ…

ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಶ್ರೀನಗರದ ಮಿಯಾನ್ ಅಬ್ದುಲ್ ಕಯೂಮ್‌ ಸೇರಿದಂತೆ ಕಣಿವೆಯ ಇಬ್ಬರು ಉನ್ನತ ವಕೀಲರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಬಂಧಿಸಿದುದಕ್ಕೆ ನೀಡಲಾದ ಹಲವು ಕಾರಣಗಳಲ್ಲಿ ಇವೂ ಸೇರಿವೆ. ಅವರ ಕುಟುಂಬಗಳು ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಸಲ್ಲಿಸಿದ್ದು, ಅದನ್ನು ಈಗ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

ಹೈಕೋರ್ಟ್ ಬಾರ್ ಅಸೋಸಿಯೇಷನ್ ​​ಪ್ರಕಾರ, ಪಿಎಸ್ಎ ಅಡಿಯಲ್ಲಿ ನಾಲ್ವರು ವಕೀಲರನ್ನು ಬಂಧಿಸಲಾಗಿದೆ. ನಜೀರ್ ಅಹ್ಮದ್ ರೊಂಗಾ ಮುರಾದಾಬಾದ್ ಸೆಂಟ್ರಲ್ ಜೈಲಿನಲ್ಲಿದ್ದು ಮಿಯಾನ್ ಕಯೂಮ್ ಅವರನ್ನು ಸೆಂಟ್ರಲ್ ಜೈಲು ಆಗ್ರಾಕ್ಕೆ ಕಳುಹಿಸಲಾಗಿದೆ. ಅನಂತ್‌ನಾಗ್ ಬಾರ್ ಅಧ್ಯಕ್ಷ ಫಯಾಜ್ ಅಹ್ಮದ್ ಸೊಡಾಗರ್ ಮತ್ತು ಬಾರಾಮುಲ್ಲಾ ಬಾರ್ ಅಧ್ಯಕ್ಷ ಅಬ್ದುಲ್ ಸಲಾಮ್ ರಾಥರ್ ಅವರನ್ನು ಪಿಎಸ್‌ಎ ಅಡಿಯಲ್ಲಿ ಬಂಧಿಸಲಾಗಿದೆ.

ರೊಂಗಾ ಅವರು “ಭಾರತದ ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸುವುದರ ವಿರುದ್ಧ ಮತ್ತು ಹಿಂದಿನ ಜಮ್ಮು ಕಾಶ್ಮೀರವನ್ನು ವಿಭಜಿಸುವುದರ ವಿರುದ್ಧ ಇದ್ದರು ಎಂದು ಆರೋಪಿಸಲಾಗಿದೆ ಎಂದು ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.