ಸನ್ಮಾರ್ಗ ವಾರ್ತೆ
ಔರಂಗಾಬಾದ್,ಅ.3:ಮಹಾತ್ಮಾ ಗಾಂಧಿಯ ಮಾತುಗಳ ಮೂಲಕ ಹೊಗಳುವ ಬಿಜೆಪಿಯ ಮನಸ್ಸಿನಲ್ಲಿ ಗಾಂಧಿ ಹಂತಕ ಗೋಡ್ಸೆ ಪ್ರತಿಷ್ಠಾಪಿತನಾಗಿದ್ದಾನೆ ಎಂದು ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಹೇಳಿದ್ದಾರೆ.
ಗೋಡ್ಸೆ ಒಂದೇ ಗುಂಡಿನಲ್ಲಿ ಮಹಾತ್ಮ ಗಾಂಧಿಯನ್ನು ಕೊಲೆ ಮಾಡಿದ್ದರೆ ಈ ಕಾಲದಲ್ಲಿ ಗೋಡ್ಸೆಗಳು ಭಾರತವನ್ನು ನಿತ್ಯವೂ ಕೊಲೆ ಮಾಡುತ್ತಿದ್ದಾರೆ. ಗಾಂಧೀಜಿಯ ಹೆಸರು ಹೇಳಿ ಬಿಜೆಪಿ ಸರಕಾರ, ಜನರು ಹಾಗೂ ದೇಶವನ್ನು ವಂಚಿಸುತ್ತಿದ್ದೆ. ಇವರಿಂದ ದೇಶವನ್ನು ರಕ್ಷಿಸಲು ಪ್ರಯತ್ನಿಸಬೇಕೆಂದು ಗಾಂಧೀಜಿಯವರ ಅನುಯಾಯಿಗಳಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ದೇಶ ವ್ಯಾಪಕವಾಗಿ ಪೌರತ್ವ ಪಟ್ಟಿ ಜಾರಿಗೆ ತರಲಾಗುವುದು ಎಂದು ಘೋಷಿಸಿದ್ದಾರೆ. ಅವರು ಭಾರತದಲ್ಲಿ ಒಂದು ಸಂವಿಧಾನ ಇದೆ ಎಂದು ಮರೆತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದೇಶದಲ್ಲಿ ಬದಲಾವಣೆ ಬರಬಹುದು ಎಂಬ ನಿರೀಕ್ಷೆ ಇದೆ. ಮಹಾರಾಷ್ಟ್ರ ವಿಧಾನಸಭೆಗೆ ಸ್ಪರ್ಧಿಸುವ ಎಐಎಂಐಎಂ ಅಭ್ಯಥಿಗಳ ಪಟ್ಟಿಯನ್ನು ಹೊರಬಿಟ್ಟಿದ್ದೇವೆ ಎಂದು ಉವೈಸಿ ಹೇಳಿದರು. ಇದೇ ಅಕ್ಟೋಬರ್ 21ಕ್ಕೆ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಕ್ಟೋಬರ್ 24ಕ್ಕೆ ಮತ ಎಣಿಕ ನಡೆದು ಫಲಿತಾಂಶ ಪ್ರಕಟವಾಗಲಿದೆ.












