ಜೈ ಶ್ರೀ ರಾಮ್ ಕೂಗು ಹಾಕಿ ಬಿಹಾರದಲ್ಲಿ ಕೊಲೆ ಯತ್ನ!

0
2149

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.7: ಜೈ ಶ್ರೀ ರಾಮ್ ಕೊಲೆಯ ಕೂಗು ಆಗಿದೆ ಎಂದು ಪ್ರಧಾನಿಗೆ ಪತ್ರ ಬರೆದ 49 ಮಂದಿ ಪ್ರಮುಖರ ವಿರುದ್ಧ ದೇಶದ್ರೋಹ ಆರೋಪದಲ್ಲಿ ಕೇಸು ದಾಖಲಿಸಿದ ಅದೇ ಬಿಹಾರದಲ್ಲಿ ಜೈ ಶ್ರೀ ರಾಮ್ ಕೂಗು ಹಾಕಿ ಕೊಲೆ ಪ್ರಕರಣದ ಆರೋಪಿಯನ್ನು ಹೊಡೆದು ಕೊಲ್ಲಲು ಯತ್ನಿಸಿರುವ ವೀಡಿಯೊ ವೈರಲ್ ಆಗಿದೆ.

ಬಿಹಾರದ ಕೈಮುರ್ ಜಿಲ್ಲೆಯ ಬಾಭುವದಲ್ಲಿ ಪೊಲೀಸರ ಮುಂದೆಯೇ ಜನರ ಗುಂಪು ನೋಡುತ್ತಿದ್ದಂತೆ ಅತಿ ಕ್ರೂರವಾಗಿ ಹೊಡೆದು ಯುವಕನ ಎದೆಗೆ ಹತ್ತಿ ಕುಳಿತು ಜೈ ಶ್ರೀ ರಾಮ್ ಕೂಗು ಹಾಕಿದ ಘಟನೆ ನಡೆದಿದೆ. ದಾಳಿಗೊಳಗಾದ ವ್ಯಕ್ತಿ ಬಾಭುವ ಕೌನ್ಸಿಲರ್‌ರ ಪುತ್ರ ಶಾಹೀದ್‍ ಎಂದು ಗುರುತಿಸಲಾಗಿದ್ದು, ಕೈಮುರ್ ಸದರ್ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ದಾಖಲಿಸಲಾಗಿದೆ. ಬಾಭುವದ ಬಜರಂಗದಳದ ಮಾಧವ್ ಸಿಂಗ್‍ರೊಂದಿಗೆ ನಡೆದ ಚಕಮಕಿಯಲ್ಲಿ ಶಾಹಿದ್ ಗುಂಡು ಹಾರಿಸಿದ್ದ.

ಆಸ್ಪತ್ರೆಯಲ್ಲಿ ಮಾಧವ್ ಸಿಂಗ್ ಮೃತಪಟ್ಟಿದ್ದರು. ನಂತರ ಜೈ ಶ್ರೀ ರಾಮ್ ಕೂಗು ಹಾಕಿದ ತಂಡ ಶಾಹಿದ್‍ನನ್ನು ನಡು ರಸ್ತೆಯಲ್ಲಿ ಎಳೆದು ಹಾಕಿ ಎದೆಯ ಮೇಲೆ ಕುಳಿತು ಮಾರಣಾಂತಿಕವಾಗಿ ಹೊಡೆದಿದೆ. ನೂರಾರು ಪೊಲೀಸರು ನೋಡುತ್ತಿದ್ದಂತೆ ನಡು ರಸ್ತೆಯಲ್ಲಿ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಜೀವಂತ ಶವದಂತಾದ ಯುವಕನ ಎದೆಯ ಮೇಲೆ ಹತ್ತಿದ ಒಬ್ಬಾತ ಜೈ ಶ್ರೀ ರಾಮ್ ಕೂಗು ಹಾಕಿದ್ದಾನೆ. ಅಲ್ಲಿದ್ದ ಮಕ್ಕಳ ಸಹಿತ ಹಲವರು ಜೈ ಶ್ರೀ ರಾಮ್ ಘೋಷಣೆ ಹಾಕಿದ್ದಾರೆ ಎಂದು ವರದಿ ತಿಳಿಸಿದೆ.