ಲಂಡನ್‌ಗೆ ತೆರಳುತ್ತಿದ್ದ ನನ್ನನ್ನು ಹೇಡಿ ಮೋದಿ ಸರ್ಕಾರ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆದಿದೆ: ಸಿಜೆಪಿ ನಾಯಕ ಸೌರವ್ ದಾಸ್‌

0
18

ಸನ್ಮಾರ್ಗ ವಾರ್ತೆ

ದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಾರ್ಟಿ ನಾಯಕ ಸೌರವ್ ದಾಸ್ ವಿರುದ್ಧ ದೂರು ದಾಖಲಾಗಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ತೆರಳುತ್ತಿದ್ದಾಗ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ತಡೆಯಲಾಯಿತು ಎಂದು ಸೌರವ್ ಹೇಳಿದ್ದಾರೆ. ವಲಸೆ (ಇಮಿಗ್ರೇಷನ್) ಕೌಂಟರ್ ತಲುಪಿದಾಗ, ತಮ್ಮ ಪಾಸ್‌ಪೋರ್ಟ್‌ಗೆ ಪ್ರಯಾಣ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಈ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ ಮತ್ತು ಇದರಲ್ಲಿ ವಲಸೆ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

“ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ತೆರಳುತ್ತಿದ್ದ ನನ್ನನ್ನು ಹೇಡಿ ಮೋದಿ ಸರ್ಕಾರ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆದಿದೆ,” ಎಂದು ಸೌರವ್ ದಾಸ್ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

ಸೌರವ್ ದಾಸ್ ಇನ್‌ಸ್ಟಾಗ್ರಾಮ್‌ನಲ್ಲಿಯೂ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮೋದಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟವು ನನ್ನನ್ನು ಉಪನ್ಯಾಸ ನೀಡಲು ಆಹ್ವಾನಿಸಿತ್ತು. ಆದರೆ ನಾನು ವಲಸೆ ಕೌಂಟರ್ ತಲುಪಿದಾಗ, ಹೇಡಿ ಸರ್ಕಾರವು ನಾನು ದೇಶ ತೊರೆಯುವುದನ್ನು ತಡೆಯಲು ನನ್ನ ಪಾಸ್‌ಪೋರ್ಟ್ ಅನ್ನು ಕಣ್ಗಾವಲು ಪಟ್ಟಿಯಲ್ಲಿ (ವಾಚ್ ಲಿಸ್ಟ್) ಇರಿಸಿದೆ ಎಂದು ನನಗೆ ತಿಳಿಸಲಾಯಿತು,” ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

“ಹೇಡಿ ಸರ್ಕಾರವು ವಿದ್ಯಾವಂತರ ಧ್ವನಿಗೆ ಹೆದರುತ್ತದೆ. ಭಾರತದ ಧ್ವನಿಯನ್ನು ಜಗತ್ತಿಗೆ ಕೊಂಡೊಯ್ಯುವವರನ್ನೂ ತಡೆಯುವ ಮಟ್ಟಕ್ಕೆ ಸರ್ಕಾರ ಇಳಿದಿದೆ,” ಎಂದು ಸೌರವ್ ದಾಸ್ ಅವರನ್ನು ಬೆಂಬಲಿಸಿ ‘ಎಕ್ಸ್’ನಲ್ಲಿ ಸಿಜೆಪಿ ಬರೆದಿದೆ.

ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಮತ್ತು ಸಹ-ಸಂಚಾಲಕ ಅಶುತೋಷ್ ರಾಂಕಾ ಅವರೊಂದಿಗೆ ಸೌರವ್ ದಾಸ್ ಕೂಡ ಸಂಘಟನೆಯ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಸಿಜೆಪಿ ನಡೆಸಿದ ಪ್ರತಿಭಟನೆಯ ನಂತರ, ಅಕ್ಟೋಬರ್‌ನಲ್ಲಿ ದೆಹಲಿ ಪೊಲೀಸರು ಸೌರವ್ ದಾಸ್ ಸೇರಿದಂತೆ ಮೂವರು ನಾಯಕರನ್ನು ಬಂಧಿಸಿದ್ದರು.

ತಲಾ 50,000 ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿ ಬಾಂಡ್ ಸಲ್ಲಿಸಿದ ನಂತರ ಅಕ್ಟೋಬರ್ 21 ರಂದು ಅವರನ್ನು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.