ಸನ್ಮಾರ್ಗ ವಾರ್ತೆ-
ನಂದಿತಾ ಸೇನ್ ಗುಪ್ತಾ
ಬೆಹ್ರಾಸೈ (ಸೆರಿಕೆಲಾ-ಖಾರ್ಸವಾನ್): ಸೆ.11- ಶಾಯಿಸ್ತಾ ಪರ್ವೀನ್ ವಿಧವೆಯಾಗಿ ಮೂರು ತಿಂಗಳಾಯಿತು. ತಬ್ರೆಜ್ ಅನ್ಸಾರಿ ಅವಳ ಜೊತೆ ಇದ್ದುದು ಬರೇ ಎರಡು ತಿಂಗಳು. ಅವನ ವಯಸ್ಸು 22, ಅವಳು 19. ಜೂನ್ 17 ರಂದು ತಬ್ರೆಜ್ ನನ್ನ ಹತ್ಯೆಗೈದ ನಂತರದ ದಿನಗಳಲ್ಲಿ, ಶಾಯಿಸ್ತಾ ಅನಾರೋಗ್ಯಕ್ಕೆ ತುತ್ತಾದಳು ಮತ್ತು ಗರ್ಭಪಾತಕ್ಕೆ ಒಳಗಾದಳು. ತನ್ನ ಚೂರುಪಾರು ಜೀವನವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ಯೋಚಿಸುತ್ತಾ ಅವಳು ಗಂಟೆಗಳ ಕಾಲ ಏಕಾಂಗಿಯಾಗಿ ಕುಳಿತುಕೊಳ್ಳುತ್ತಿದ್ದಳು. ಅವಳ ಕಿವಿಯಲ್ಲಿ ಕೇವಲ ಒಂದೇ ಪದ ಅನುರುಣಿಸುತ್ತಿತ್ತು- ನ್ಯಾಯ. ಅದು ಅವಳನ್ನು ಜೀವಂತವಾಗಿರಿಸಿದೆ.
“ಇನ್ಸಾಫ್ ಚಾಹಿಯೆ, ಬಸ್” ಎಂದು ಅವಳು ಹೇಳಿದಳು. ಆದರೆ, ಅದು ದೀರ್ಘವಾದ, ಕಠಿಣವಾದ ಹಾದಿಯಾಗಬಹುದೆಂದು ಶಾಯಿಸ್ತಾಗೆ ತಿಳಿದಿದೆ. ಆದರೆ ನ್ಯಾಯ ದೊರೆಯುವವರೆಗೂ ಹೋರಾಡುವ ನಿರ್ಧಾರದಲ್ಲಿದ್ದಾಳೆ. ನಾನು ನನ್ನ ಗಂಡನಿಗೆ ನ್ಯಾಯವನ್ನು ಹುಡುಕುತ್ತೇನೆ. ಒಬ್ಬ ಮುಗ್ಧ ವ್ಯಕ್ತಿಯನ್ನು ಕ್ರೂರವಾಗಿ ಕೊಲ್ಲಲಾಯಿತು ಎಂದು ಹೇಳಿದಳು.
ಶಾಯಿಸ್ತಾ ಅವರ ಕುಟುಂಬ ವಾಸಿಸುವ ಬೆಹ್ರಾಸೈನಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಕಡಮ್ಡಿಹಾದ ಎಂಬಲ್ಲಿ ವಾಸಿಸುವ ತಬ್ರೆಜ್, ಪುಣೆಯ ಚಿಕ್ಲಿ ಪ್ರದೇಶದಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಏಪ್ರಿಲ್ 27 ರಂದು ಶಾಯಿಸ್ತಾ ಅವರನ್ನು ವಿವಾಹವಾದರು ಮತ್ತು ಶೀಘ್ರದಲ್ಲೇ ಪುಣೆಗೆ ತೆರಳಿದರು. ಅವರು 45 ದಿನಗಳ ನಂತರ ಹಿಂದಿರುಗಿದರು. ಶಾಯಿಸ್ತಾಳನ್ನು ಪುಣೆಗೆ ಕರೆದೊಯ್ಯುವ ಯೋಜನೆ ಹೊಂದಿದ್ದರು. “ಅವರು ನಮಗೆ ಉಳಿಯಲು ಪುಣೆಯಲ್ಲಿ ಒಂದು ಕೋಣೆಯನ್ನು ಹುಡುಕುತ್ತಿದ್ದರು” ಎಂದು ಶಾಯಿಸ್ತಾ ಹೇಳಿದರು.
ಆ ರಾತ್ರಿ ತಬ್ರೇಜ್ ಗೆ ಜಮ್ಶೆಡ್ಪುರದಿಂದ ಕದಮ್ಡಿಹಾಕ್ಕೆ ಹೋಗಬೇಕಿತ್ತು. ಸುಮಾರು 10 ಕಿ.ಮೀ ದೂರದಲ್ಲಿರುವ ಧಟ್ಕಿಡಿಹ್ ಮೂಲಕ ಒಳ ಮಾರ್ಗವಾಗಿ ಹೋಗಲು ಅವರು ತೀರ್ಮಾನಿಸಿದರು. ಆದರೆ, ಕದಿಯಲು ಬಂದಿದ್ದಾನೆಂದು ಹೇಳಿದ ಕೆಲವರು ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮುಂಜಾನೆ ತನಕ ಹೊಡೆದರು. ಈ ಮಧ್ಯೆ, ಘಟನೆಯ ವಿಡಿಯೋವೊಂದು ಬಹಿರಂಗವಾಗಿದ್ದು, ಜೈ ಶ್ರೀ ರಾಮ್ ಮತ್ತು ಜೈ ಹನುಮಾನ್ ಅವರನ್ನು ಹೇಳುವಂತೆ ಒತ್ತಾಯಿಸಲಾಗಿರುವುದು ಸ್ಪಷ್ಟವಾಗಿತ್ತು.
ಉರ್ದು ಮತ್ತು ಅರೇಬಿಕ್ ಭಾಷೆಯ ಶಿಕ್ಷಕರಾಗಿರುವ ಮತ್ತು ಮೌಲಾನಾರೂ ಆಗಿರುವ ಮಸ್ರೂರ್ ಆಲಂ ಅವರು ತಬ್ರೇಜ್ ಅವರ ಇಬ್ಬರು ಚಿಕ್ಕಪ್ಪಂದಿರಲ್ಲಿ ಒಬ್ಬರಾಗಿದ್ದಾರೆ. ಅವರು ಶಾಯಿಸ್ತಾ ಜೊತೆ ನಿಂತಿದ್ದಾರೆ. ಪ್ರಕರಣವು ಮುಕ್ತಾಯಗೊಂಡ ನಂತರ, ನಾವು ಅವಳ ಮರು ವಿವಾಹದ ಬಗ್ಗೆ ಯೋಚಿಸುತ್ತೇವೆ ಎಂದು ಅವರು ಹೇಳಿದರು.
ಸರ್ಕಾರದ ಕಡೆಯಿಂದ ಯಾರೂ ವಿಚಾರಿಸಲು ಬಂದಿಲ್ಲ. ಸ್ಥಳೀಯ ಶಾಸಕರು ಸಹ ಮಾತಾಡಿಸಿಲ್ಲ ಎಂದು ಶಾಯಿಸ್ತಾ ಹೇಳಿದರು- “ಕೊಯಿ ನಹಿ ಆಯಾ.
ಇದೇವೇಳೆ ಮುಖ್ಯ ಆರೋಪಿ ಕಮಲ್ ಮಹತೋನ ಮನೆ ಅಚ್ಚುಕಟ್ಟಾಗಿದೆ ಮತ್ತು ಹಳ್ಳಿಯಲ್ಲಿ ಹೆಚ್ಚು ಶ್ರೀಮಂತ ಮನೆಗಳಲ್ಲಿ ಒಂದಾಗಿದೆ. ಪ್ರತಿ ಬಾಗಿಲಿನ ಹೊಸ್ತಿಲಲ್ಲಿ ಸಾಂಪ್ರದಾಯಿಕ ಮಹಡಿ ಕಲೆ ಇದೆ. ಈತನ ಎಫ್ಐಆರ್ ಆಧಾರದ ಮೇಲೆ ತಬ್ರೆಜ್ನನ್ನು ಬಂಧಿಸಲಾಗಿತ್ತು. ಆತನ 21 ವರ್ಷದ ಮಗಳು ಮೋನಿಕಾ ಜಮ್ಶೆಡ್ಪುರದ ಕಾಲೇಜಿಗೆ ಹೋಗುತ್ತಾಳೆ. ಆಕೆಯ ತಂದೆ ಮತ್ತು ಸಹೋದರ ಸುಮನ್ ಇಬ್ಬರೂ ಈಗ ಜೈಲಿನಲ್ಲಿದ್ದಾರೆ. “ಏನು ನಡೆಯುತ್ತಿದೆ ಎಂದು ನನಗೆ ತಿಳಿದಿಲ್ಲ” ಎಂದು ಆಕೆ ಅಳುತ್ತಾ ಹೇಳಿದಳು.













