ಪಿಎಂಸಿ ಬ್ಯಾಂಕಿನಲ್ಲಿ 90 ಲಕ್ಷ ಠೇವಣಿ ಇರಿಸಿದ ವ್ಯಕ್ತಿ ಹೃದಯಾಘಾತದಿಂದ ಸಾವು

0
605

ಸನ್ಮಾರ್ಗ ವಾರ್ತೆ

ಮುಂಬೈ: ರಿಸರ್ವ್ ಬ್ಯಾಂಕಿನಿಂದ ಕ್ರಮ ಎದುರಿಸುತ್ತಿರುವ ಪಂಜಾಬ್ ಆಂಡ್ ಮಹಾರಾಷ್ಟ್ರ ಸಹಕಾರಿ ಬ್ಯಾಂಕಿನ(ಪಿಎಂಸಿ) ವಿರುದ್ಧ ಧರಣಿಯಲ್ಲಿ ಭಾಗವಹಿಸಿದ ಠೇವಣಿದಾರರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪಿಎಂಸಿ ಬ್ಯಾಂಕಿನಲ್ಲಿ 90 ಲಕ್ಷ ರೂಪಾಯಿ ಇಟ್ಟಿರುವ ಓಸಿವಾರದ ಸಂಜಯ ಗುಲಾಟಿ(51) ಮೃತಪಟ್ಟ ವ್ಯಕ್ತಿ ಆಗಿದ್ದು ಸೋಮವಾರ ಅವರು ಧರಣಿಯಲ್ಲಿ ಕುಳಿತು ಮನೆಗೆ ಮರಳಿದ್ದರು. ಆಹಾರ ಸೇವಿಸುತ್ತಿದ್ದ ವೇಳೆ ಅವರು ಕುಸಿದು ಬಿದ್ದು ಮೃತಪಟ್ಟರು.

ಸಂಜಯ್ ಜೆಟ್‍ ಏರ್‍ವೇಸ್ ಇಂಜಿನಿಯರಾಗಿದ್ದು ಕಂಪೆನಿ ದಿವಾಳಿಯೆದ್ದು ಕೆಲಸ ಕಳಕೊಂಡಿದ್ದರು. ತಂದೆ-ತಾಯಿ, ಪತ್ನಿ ಭಿನ್ನ ಸಾಮಥ್ರ್ಯದ ಮಗನ ಸಹಿತ ಇಬ್ಬರು ಮಕ್ಕಳನ್ನು ಹೊಂದಿದ್ದ ಕುಟುಂಬ ಅವರದ್ದು. ಬ್ಯಾಂಕಿನ ಹಣದ ಆಶ್ರಯದಲ್ಲಿ ಅವರು ಜೀವನ ವ್ಯವಸ್ಥೆ ಸರಿದೂಗುತ್ತಿತ್ತು. ಸೋಮವಾರ ನಡೆದ ಧರಣಿಯಲ್ಲಿ ಸಂಜಯ್ ಜೊತೆ ಅವರ ಎಂಬತ್ತು ವರ್ಷದ ತಂದೆಯೂ ಪಾಲ್ಗೊಂಡಿದ್ದರು.

ಸಾಲದಲ್ಲಿ ಅಕ್ರಮ ಕಂಡು ಬಂದ ಹಿನ್ನೆಲೆಯಲ್ಲಿ ಬ್ಯಾಂಕಿನ ವಿರುದ್ಧ ರಿಸರ್ವ್ ಬ್ಯಾಂಕ್ ನಿಯಂತ್ರಣ ಹೇರಿದೆ. ಅತ್ಯಗತ್ಯ ವಿಷಯಗಳಿಗೆ ಹಣ ಸಿಗದ್ದರಿಂದ ಠೇವಣಿದಾರರು ಹೋರಾಟಕ್ಕಿಳಿದಿದ್ದಾರೆ. ಠೇವಣಿ ಹಣ ಮರಳಿ ಸಿಗುವುದು ನಮ್ಮ ಬೇಡಿಕೆ ಎಂದು ಸೋಮವಾರ ಸತ್ಯಾಗ್ರಹಕ್ಕೆ ಬಂದವರು ಹೇಳಿದ್ದರು. ಈಗ ಠೇವಣಿದಾರರಿಗೆ 40,000 ರೂಪಾಯಿ ಹಣವನ್ನು ಹಿಂಪಡೆಯುವ ಅವಕಾಶ ಇದೆ.