ಜೆಎನ್‍ಯು ವಿದ್ಯಾರ್ಥಿ ನಜೀಬ್ ಪತ್ತೆಗಾಗಿ ಆಗ್ರಹಿಸಿ ಎಸ್‌ಐಓ ದಿಂದ ‘ವೇರ್ ಈಸ್ ನಜೀಬ್’ ಮಾನವ ಸರಪಳಿ

0
663

ಸನ್ಮಾರ್ಗ ವಾರ್ತೆ

ಮಂಗಳೂರು: ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ, `ನಜೀಬ್ ಅಹ್ಮದ್` ಎಂಬ ಸಂಶೋಧನಾ ವಿದ್ಯಾರ್ಥಿಯ ಮೇಲೆ ಕೆಲ ಸ್ಥಾಪಿತ ಹಿತಾಸಕ್ತಿಗಳು 2016 ಅಕ್ಟೋಬರ್ 14ರಂದು ಹಲ್ಲೆ ನಡೆಸಿದ್ದು, ನಂತರದಲ್ಲಿ ನಜೀಬ್ ಕಾಣೆಯಾಗಿ ಇಂದಿಗೆ ಮೂರು ವರ್ಷ ಕಳೆದಿದೆ. ಸಿಬಿಐ ತನಿಖೆ ನಡೆಸಿದ್ದರೂ ಈವರೆಗೆ ನಜೀಬ್ ರನ್ನು ಪತ್ತೆ ಮಾಡಲಾಗಿಲ್ಲ ಮತ್ತು ಆತನ ಬಗ್ಗೆ ಯಾವುದೇ ಮಾಹಿತಿ ಇಲ್ಲ.  ಈ ಹಿನ್ನೆಲೆಯಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್‌ಐಓ), ದ.ಕ.ಜಿಲ್ಲಾ ಘಟಕವು ‘ವೇರ್ ಈಸ್ ನಜೀಬ್’ (WHERE IS NAJEEB?) ಎಂಬ ಘೋಷಣೆಯೊಂದಿಗೆ ನ್ಯಾಯಕ್ಕಾಗಿ ಆಗ್ರಹಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಐ.ಓ ದ.ಕ. ಜಿಲ್ಲಾ ಅಧ್ಯಕ್ಷ ರಿಝ್ವಾನ್ ಅಝ್ಹರಿ, ಸರಕಾರ ಸಿಬಿಐ ತನಿಖೆಗೆ ಒಪ್ಪಿಸಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಜೀಬ್ ರವರ ತಾಯಿ ಫಾತಿಮಾ ನಫೀಸ್‌ರವರು ತನ್ನ ಮಗನ ನಾಪತ್ತೆ ಹಿಂದಿರುವ ಶಕ್ತಿಗಳ ವಿರುದ್ಧ ನಿರಂತರವಾಗಿ ಕಾನೂನಿನ ಮೊರೆ ಹೋಗುತ್ತಿದ್ದರೂ, ನ್ಯಾಯ ಮರೀಚಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಓ ಅವರ ಹೋರಾಟದೊಂದಿಗೆ ಬೆಂಗಾವಲಾಗಿ ನಿಲ್ಲುತ್ತದೆ ಎಂದರು.

ಪ್ರಧಾನಿಯವರ ಸಂಬಂಧಿಕರೋರ್ವರ ಪರ್ಸ್ ಕಳ್ಳರು ಕದ್ದು ಹೋದಾಗ ನೂರಾರು ಪೊಲೀಸರನ್ನು ಈ ಕೇಸ್‌ನ ಹಿಂದೆ ನಿರಂತರವಾಗಿ ಕೆಲಸ ಮಾಡಿಸಿ, ಕಳ್ಳರನ್ನು ಹಿಡಿಯುವಲ್ಲಿ ಸಫಲವಾಗಲು ಈ ದೇಶದಲ್ಲಿ ಸಾಧ್ಯವಾಗುವುದಾದರೆ ನಜೀಬ್ ರನ್ನು ಪತ್ತೆ ಮಾಡಲು ಹಾಗೂ ಅವರ ನಾಪತ್ತೆ ಹಿಂದಿನ ದಿನ ನಡೆದ ವಾಗ್ವಾದದಲ್ಲಿ ಶಾಮೀಲಾದವರನ್ನು ಸಿಬಿಐ ಸರಿಯಾಗಿ ವಿಚಾರಣೆ ನಡೆಸಿದ್ದರೆ ಇಂದು ನಜೀಬ್ ರ ತಾಯಿ ಫಾತಿಮಾರವರು ಪರಿತಪಿಸುವಂತಿರಲಿಲ್ಲ. ಕಳೆದ ಮೂರು ವರ್ಷಗಳಿಂದ ಎಸ್.ಐ.ಓ ನಜೀಬ್ ರವರ ತಾಯಿ ಜೊತೆ ಹೋರಾಟದಲ್ಲಿ ಮುಂದುವರಿಯುತ್ತಿದೆ. ನ್ಯಾಯ ಸಿಗುವವರೆಗೂ ಪ್ರಶ್ನಿಸುತ್ತಾ ಇರುತ್ತೇವೆ ಎಂದು ಎಸ್‌ಐಓ ಮಂಗಳೂರು ನಗರಾಧ್ಯಕ್ಷ ಇರ್ಷಾದ್ ವೇಣೂರು ತಿಳಿಸಿದರು.

“WHERE IS NAJEEB?” ಎಂಬ ಘೋಷಣೆ ಇರುವ ಟೀ ಶರ್ಟ್ ಹಾಕಿ, ನ್ಯಾಯಕ್ಕಾಗಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಎಸ್ ಐ ಓ ಜಿಲ್ಲಾ ಕಾರ್ಯದರ್ಶಿ ಮುಂಝಿರ್ ಅಹ್ಸನ್, ಮಂಗಳೂರು ಕಾರ್ಯದರ್ಶಿ ಮುಬೀನ್ ಬೆಂಗ್ರೆ, ಮುಬಾರಿಶ್ ಪಾಣೆಮಂಗಳೂರು, ಮುತಹ್ಹರ್, ಸಿನಾನ್ ಸಿ.ಎಚ್, ಔಸಾಫ್ ವಾಮಂಜೂರು, ವಾಸಿಫ್ ಕೋಟೆಕಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.