ಸನ್ಮಾರ್ಗ ವಾರ್ತೆ
ಮುಂಬೈ,ಅ.31: ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವ ಕುರಿತಿದ್ದ ವಿವಾದ ಕೊನೆಗೊಳ್ಳುವ ಲಕ್ಷಣಗಳು ಕಂಡು ಬಂದಿದ್ದು, ಶಿವಸೇನೆ ತನ್ನ ಪಟ್ಟು ಸಡಿಲಿಸಿದೆ. ಪುನಃ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗುವುದನ್ನು ಸ್ವಾಗತಿಸಿದೆ. ಶಿವಸೇನೆಯ ಬೆಂಬಲದಲ್ಲಿ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎನ್ನುವ ಫಡ್ನವಿಸ್ ಹೇಳಿಕೆ ನೀಡಿದ್ದಕ್ಕಾಗಿ ಅವರನ್ನು ಶಿವಸೇನೆ ನಾಯಕ ಸಂಜಯ್ ರಾವುತ್ ಅಭಿನಂದಿಸಿದ್ದಾರೆ. ಫಡ್ನವಿಸ್ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ-ಶಿವಸೇನೆ ಸರಕಾರ ರಚಿಸಲಿದೆ ಎಂದು ಹೇಳಿದ್ದರು.
ಮುಖ್ಯಮಂತ್ರಿ ಸ್ಥಾನ ಮತ್ತು ಸಚಿವರ ಸ್ಥಾನದಲ್ಲಿ ಸಮಾನ ಪಾಲನ್ನು ಶಿವಸೇನೆ ಕೇಳುತ್ತಿತ್ತು. ಮುಖ್ಯಮಂತ್ರಿ ಸ್ಥಾನದಲ್ಲಿ ಫಿಫ್ಟಿ-ಫಿಫ್ಟಿ(50-50) ಅವಕಾಶವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿತ್ತು. ಕೃತಜ್ಞತಾ ಸೂಚಕ ಭಾಷಣದಲ್ಲಿ ಫಡ್ನವಿಸ್ ಉದ್ಧವ್ ಠಾಕ್ರೆಗೆ ಕೃತಜ್ಞತೆ ಸೂಚಿಸಿದ್ದರು.
ಉಪಮುಖ್ಯಮಂತ್ರಿ ಸ್ಥಾನ, ವಿತ್ತ, ಕೃಷಿ, ಗೃಹ ಸಹಾಯಕ ಸಚಿವ ಸ್ಥಾನ ಸಹಿತ ಹದಿನಾರು ಖಾತೆಗಳನ್ನು ಹಾಗೂ ಕೇಂದ್ರ ಕ್ಯಾಬಿನೆಟ್ ಸಚಿವ ಸ್ಥಾನವನ್ನು ಬಿಜೆಪಿ ಶಿವಸೇನೆ ಕೊಡಲು ನಿರ್ಧರಿಸಿದೆ. ಇದಕ್ಕೆ ಶಿವಸೇನೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಶಿವಸೇನೆ ಶಾಸಕರ ಸಭೆ ಶಿವಸೇನೆ ಭವನದಲ್ಲಿ ನಡೆಯಲಿದ್ದು ಅಲ್ಲಿ ಶಾಸಕಾಂಗ ಪಕ್ಷ ನಾಯಕನ ಆಯ್ಕೆ ನಡೆಯಲಿದೆ. ನಂತರವೇ ಉದ್ಧವ್ ಠಾಕ್ರೆ ನಿಲುವು ವ್ಯಕ್ತಪಡಿಸಲಿದ್ದಾರೆ.












