ಸನ್ಮಾರ್ಗ ವಾರ್ತೆ
ಜೈಪುರ: ರಾಜಸ್ಥಾನದ ಪಂಚಾಯತ್ ಚುನಾವಣೆಯ ಮತ ಎಣಿಕೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಭಾರಿ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಉತ್ತಮ ಮುನ್ನಡೆ ಸಾಧಿಸಿದೆ. ವಿಶೇಷವಾಗಿ ಜೈಪುರದಲ್ಲಿ ಕಾಂಗ್ರೆಸ್ ಭರ್ಜರಿ ಪ್ರದರ್ಶನ ನೀಡಿದೆ. ರಾಜಸ್ಥಾನದ 37 ಜಿಲ್ಲೆಗಳ 1,275 ಜಿಲ್ಲಾ ಪರಿಷತ್ ವಾರ್ಡ್ಗಳಲ್ಲಿ 7543 ಪಂಚಾಯತ್ ಸಮಿತಿ ವಾರ್ಡ್ಗಳ ಮತ ಎಣಿಕೆಯಲ್ಲಿ ಇದುವರೆಗೆ ಎಣಿಕೆಯಾದ 27ರಲ್ಲಿ 14 ಕ್ಕೆ ಕಾಂಗ್ರೆಸ್ 12 ಕಡೆ ಬಿಜೆಪಿ ಮುಂದಿದೆ. ಇದೇವೇಳೆ ಸಿಕ್ಕರ್ ಜಿಲ್ಲೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ರಾಜಸ್ಥಾನ ನಗರ ಅಭಿವೃದ್ಧಿ ಸಚಿವ ಜಬರ್ ಸಿಂಗ್ ಖರೆಯವರ ಪತ್ನಿ ಮತ್ತು ಇಬ್ಬರು ಪುತ್ರರು ಸೋತಿದ್ದಾರೆ.
ಶುಕ್ರವಾರ ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭವಾಯಿತು. ಮೊದಲ ಹಂತದಲ್ಲಿ ಬಿಜೆಪಿ ಮುಂದಿತ್ತು. ನಂತರ ಕಾಂಗ್ರೆಸ್ ಮುನ್ನಡೆ ಸಾಧಿಸಿತು. ಸಿಕ್ಕರ್ ಜಿಲ್ಲೆಯ ಶ್ರೀಮಾಧೇಪುರ ಪಂಚಾಯತ್ ಸಮಿತಿ ವಾರ್ಡ್ 17ರಲ್ಲಿ ಸಚಿವ ಜಬರ್ ಸಿಂಗ್ ಖರೆಯವರ ಪತ್ನಿ ಶಾಂತಿ ದೇವಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಸರಿತಾ ಜಾಟ್ ಐವತ್ತೊಂದು ಮತಗಳ ಅಂತರದಿಂದ ಸೋಲಿಸಿದ್ದಾರೆ. ಸಚಿವರ ಪುತ್ರರಾದ ಅಜಯ್ ಸಿಂಗ್ ದುರ್ಗಾ ಸಿಂಗ್ ತಾವು ಸ್ಪರ್ಧಿಸಿದ ಸೀಟುಗಳಲ್ಲಿ ಸೋಲನುಭವಿಸಿದ್ದಾರೆ. ಜೈಪುರ ಜಿಲ್ಲಾ ಪಂಚಾಯತ್ನ ಫಲಿತಾಂಶ ಘೋಷಣೆಯಾದ ಹದಿನೈದು ವಾರ್ಡ್ಗಳಲ್ಲಿ ಹನ್ನೊಂದು ಕಾಂಗ್ರೆಸ್ ಗೆದ್ದಿದೆ ಬಿಜೆಪಿಗೆ ಎರಡು ಸೀಟು, ಹನುಮಾನ್ ಬೇನಿವಾಲರ ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿಗೆ ಒಂದು ಸೀಟಿನಲ್ಲಿ ಗೆಲುವು ಸಿಕ್ಕಿದೆ. ಜೈಪುರದ 22 ಪಂಚಾಯತ್ ಸೀಟುಗಳಲ್ಲಿ 18 ಸೀಟುಗಳಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಜೈಪುರದಲ್ಲಿ ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮ್ ಚೋಪ್ರಾ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ಮೋಹನ್ ದಾಗರ್ ಸೋಲು ಅನುಭವಿಸಿದ್ದಾರೆ. ಅಜ್ಮೀರ್ನಲ್ಲಿ ಮಾಜಿ ಶಾಸಕಿ ಸುಶೀಲ್ ಕನ್ವರ್ ಪಲಾರ ಮತ್ತು ಉದಯಪುರದ ರಿಷಭದೇವ್ ಪಂಚಾಯತ್ ಸಮಿತಿಯಲ್ಲಿ ಮಾಜಿ ಬಿಜೆಪಿ ಶಾಸಕ ನಾನಾಲಾಲ್ ಅಹಾರಿ ಅವರ ಪುತ್ರ ಸೋನು ಅಹಾರಿ ಸೋತಿದ್ದಾರೆ. ಚುರು ಜಿಲ್ಲೆಯಲ್ಲಿ ಮಾಜಿ ಬಿಜೆಪಿ ಶಾಸಕ ರಾಜೇಂದ್ರ ರಾಥೋಡ್ ಅವರ ಪುತ್ರ ಪರಾಕ್ರಮ್ ಸಿಂಗ್ ಮತ್ತು ಸೊಸೆ ಕನಿಕಾ ಸಿಂಗ್ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ ಶಾಸಕ ನರೇಂದ್ರ ಬುದಾನಿಯಾ ಅವರ ಪತ್ನಿ ಕನಕ್ ಬುದಾನಿಯಾ ಹಿನ್ನಡೆಯಲ್ಲಿದ್ದಾರೆ.
ಧೋಲ್ಪುರ್ ಪಂಚಾಯತ್ ಸಮಿತಿಯ 10ನೇ ವಾರ್ಡಿನಲ್ಲಿ ಇವಿಎಂ ಮತ ಎಣಿಕೆಯ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ತಲಾ 2,244 ಮತಗಳು ಬಂದು ಸಮಬಲವಾಗಿತ್ತು. ನಂತರ ಅಂಚೆ ಮತಗಳನ್ನು ಎಣಿಸಿದಾಗ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
‘ಒಂದು ರಾಜ್ಯ, ಒಂದು ಚುನಾವಣೆ’ ಯೋಜನೆಯಡಿ ನಾಲ್ಕು ಹಂತಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ 37 ಜಿಲ್ಲೆಗಳಲ್ಲಿ ನಡೆಯುತ್ತಿದೆ. ಕೋಟಾ, ಬಾರನ್, ಕರೌಲಿ ಮತ್ತು ಶ್ರೀ ಗಂಗಾನಗರ ಜಿಲ್ಲೆಗಳ ಹಾಲಿ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿಗಳ ಅವಧಿ ಡಿಸೆಂಬರ್ 22 ಕ್ಕೆ ಕೊನೆಗೊಳ್ಳುವುದರಿಂದ, ಆ ಜಿಲ್ಲೆಗಳ ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆ ಆಗ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.












