ಸನ್ಮಾರ್ಗ ವಾರ್ತೆ-
ನವದೆಹಲಿ; ನ. 4- ನಿನ್ನೆ ಬಿಡುಗಡೆಗೊಂಡ 2019ನೇ ಸಾಲಿನ ರಾಷ್ಟ್ರೀಯ ಆರೋಗ್ಯ ವಿವರ ಸೂಚಿಗಳು ದಂಗುಬಡಿಸುವ ರೀತಿಯಲ್ಲಿದೆ. ಇದರಲ್ಲಿ ಕ್ಯಾನ್ಸರ್ ಕುರಿತಾಗಿ ಹೊರಬಿದ್ದಿರುವ ವಿವರಗಳು ಆತಂಕಕಾರಿಯಾಗಿದೆ.
ಕರ್ನಾಟಕದಲ್ಲಿ ಕ್ಯಾನ್ಸರ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದನ್ನು ವಿವರಗಳು ಬಹಿರಂಗಪಡಿಸಿವೆ. ಮುಖ್ಯವಾಗಿ ಬಾಯಿ, ಗರ್ಭಕೋಶ, ಮತ್ತು ಸ್ತನ ಕ್ಯಾನ್ಸರ್ ನಂಥ ಸಾಮಾನ್ಯ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಕಳೆದ ಒಂದು ವರ್ಷದ ಅವಧಿಯಲ್ಲಿ ಆರು ಪಟ್ಟು ಹೆಚ್ಚಾಗಿದೆ. 2017ರಲ್ಲಿ ರಾಜ್ಯದಲ್ಲಿ 3523 ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದರೆ 2018ರಲ್ಲಿ ಈ ಸಂಖ್ಯೆ 20,084 ಕ್ಕೇರಿದೆ.
ಒಟ್ಟು ದೇಶವನ್ನೇ ಈ ವಿಷಯದಲ್ಲಿ ಪರಿಗಣಿಸಿದರೆ ಕಳೆದ ವರ್ಷಕ್ಕಿಂತ ಈ ವರ್ಷ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಶೇ. 300 ರಷ್ಟು ಹೆಚ್ಚಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ನಡೆಸುವ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣಾ ಕ್ಲಿನಿಕ್ಕುಗಳಲ್ಲಿ ದಾಖಲಾದ ಅಂಕಿ ಅಂಶಗಳನ್ನು ಆಧರಿಸಿ ಈ ದತ್ತಾಂಶವನ್ನು ಬಿಡುಗಡೆ ಮಾಡಲಾಗಿದೆ. ಖಾಸಗಿ ಲ್ಯಾಬೋರೇಟರಿ ಗಳ ದತ್ತಾಂಶಗಳನ್ನು ಇದರೊಂದಿಗೆ ಸೇರಿಸಿದರೆ ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 2018ರಲ್ಲಿ ದೇಶದಲ್ಲಿ 6.5 ಕೋಟಿ ಜನರು ಕ್ಯಾನ್ಸರ್ ತಪಾಸಣೆಗೆ ಒಳಗಾಗಿದ್ದು ಅವರಲ್ಲಿ 1.6 ಕೋಟಿ ಜನರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. 2017ರಲ್ಲಿ ಈ ಸಂಖ್ಯೆ ಕೇವಲ 39635 ರಷ್ಟು ಮಾತ್ರ ಇತ್ತು. ಗುಜರಾತಿನಲ್ಲಿ ಒಂದೇ ವರ್ಷದಲ್ಲಿ 68230 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕರ್ನಾಟಕದಲ್ಲಿ 2017ರಲ್ಲಿ 3523 ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದರೆ, 2018ರಲ್ಲಿ 20084 ಮಂದಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. 2017ರಲ್ಲಿ ಮಹಾರಾಷ್ಟ್ರದಲ್ಲಿ 1840 ಕ್ಯಾನ್ಸರ್ ರೋಗಿಗಳಿದ್ದರು ಮತ್ತು 2018ರಲ್ಲಿ ಇದು 14103ಕ್ಕೆ ಏರಿದೆ.












