ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ನ.5: ಕೊಲ್ಲಲ್ಪಟ್ಟಿರುವ ಐಎಸ್ ಮುಖ್ಯಸ್ಥ ಅಬೂಬಕರ್ ಅಲ್ ಬಗ್ದಾದಿಯ ಸಹೋದರಿ ಮತ್ತು ಕುಟುಂಬವನ್ನು ಟರ್ಕಿಯ ಸೈನ್ಯ ಬಂಧಿಸಿದೆಯೆಂದು ವರದಿಯಾಗಿದೆ.
ಸೋಮವಾರ ಸಿರಿಯದ ಅಸಾಸ್‌ನಲ್ಲಿ ನಡೆದ ದಾಳಿಯ ವೇಳೆ ಟರ್ಕಿ ಸೇನೆಗೆ ಬಗ್ದಾದಿಯ ಸಹೋದರಿ ರಝ್ಮಿಯ ಅವಾದ್(65), ಪತ್ನಿ, ಅಳಿಯ ಸೆರೆ ಸಿಕ್ಕಿದ್ದಾರೆ. ಐಎಸ್‌ಗಾಗಿ ರಝ್ಮಿಯ ಮತ್ತು ಕುಟುಂಬ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು.
ಈ ಕುಟುಂಬವನ್ನು ಬಂಧಿಸುವ ಯತ್ನ ಈ ಹಿಂದೆಯೂ ನಡೆದಿತ್ತು. ಟರ್ಕಿಯ ಆಕ್ರಮಿತ ಪ್ರದೇಶ ಅಸಾಸ್‌ನಿಂದ ಒಂದು ಕಂಟೈನರ್‌ನಿಂದ ಇವರನ್ನು ಬಂಧಿಸಲಾಗಿದೆ. ಇವರ ಜೊತೆ ಐವರು ಮಕ್ಕಳಿದ್ದರು ಎಂದು ಸೇನಾಧಿಕಾರಿಯನ್ನು ಉದ್ಧರಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಂಧಿತರನ್ನು ಪ್ರಶ್ನಿಸಲಾಗುತ್ತಿದೆ. ರಝ್ಮಿಯ ಐಎಸ್ ಬೋಧಕಿಯಾಗಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಈಕೆಯ ಸಹಾಯದಲ್ಲಿ ಇನ್ನಷ್ಟು ಬಂಧನಗಳಾಗುವ ಸಾಧ್ಯತೆಯಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.












