ಸನ್ಮಾರ್ಗ ವಾರ್ತೆ
ಮುಂಬೈ,ನ.12: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಅನಿಶ್ಚಿತತೆಯ ನಡುವೆ ರಾಜ್ಯಪಾಲರು ನಿರ್ಣಾಯ ನಿರ್ಧಾರ ತಳೆದರು. ಭಗತ್ ಸಿಂಗ್ ಕೋಸಿ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದರು. ಪ್ರಧಾನಿ ಸಚಿವ ಸಂಪುಟದ ಸಭೆ ಕರೆದಿದ್ದಾರೆ. ರಾಜ್ಯಪಾಲರ ಶಿಫಾರಸು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ ಎಂದು ಸೂಚನೆ ಲಭಿಸಿದೆ.
ಬಹುಮತ ಸಾಬೀತುಪಡಿಸ ಸಮಯ ಹೆಚ್ಚಿಸಲು ರಾಜ್ಯಪಾಲರು ತಯಾರಾಗಿಲ್ಲ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನ ಮೊರೆ ಹೋಗಲು ಶಿವಸೇನೆ ನಿರ್ಧರಿಸಿದೆ. ಬಿಜೆಪಿ ಮೂರು ದಿವಸ, ಆದರೆ ಶಿವಸೇನೆಗೆ 24 ಗಂಟೆ ಸಮಯ ನೀಡಿತ್ತು. ಈ ವಿಷಯವನ್ನು ಬೆಟ್ಟು ಮಾಡಿ ಸುಪ್ರೀಂಕೋರ್ಟನ್ನು ಸಮೀಪಿಸುವುದು ಶಿವಸೇನೆಯ ನಿರ್ಧಾರವಾಗಿದ್ದು, ಕಾಂಗ್ರೆಸ್ ನಾಯಕ ಹಿರಿಯ ವಕೀಲ ಕಪಿಲ್ ಸಿಬಲ್ ಶಿವಸೇನೆ ಪರ ವಕಾಲತ್ತು ಮಾಡಲಿದ್ದಾರೆ.
ಇದೇ ವೇಳೆ, ಸೋನಿಯಾ ಗಾಂಧಿಯ ಸೂಚನೆ ಮೇರೆಗೆ ಕಾಂಗ್ರೆಸ್ ನಾಯಕರು ಮುಂಬೈಗೆ ಬಂದಿದ್ದಾರೆ. ಅಹ್ಮದ್ ಪಟೇಲ್ ,ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ರೊಂದಿಗೆ ಚರ್ಚಿಸಲಿದ್ದಾರೆ.ಸೋನಿಯಾ ಗಾಂಧಿ ಪವಾರ್ರೊಂದಿಗೆ ಫೋನ್ ಮಾಡಿ ಚರ್ಚಿಸಿದ್ದರು.
ಈ ಹಿಂದೆ ಬಿಜೆಪಿಗೆ ರಾಜ್ಯಪಾಲ ಕೋಸಿ ಸರಕಾರ ರಚಿಸಲು ಆಹ್ವಾನಿಸಿದ್ದರು. ಅದು ವಿಫಲವಾದ್ದರಿಂದ ಶಿವಸೇನೆಯನ್ನು ಕರೆದಿದ್ದರು. ಅದೂ ವಿಫಲವಾದಾಗ ಎನ್ಸಿಪಿಗೆ ಅವಕಾಶ ಕಲ್ಪಿಸಿದ್ದರು. ಮಂಗಳವಾರ ಎಂಟೂವರೆ ಗಂಟೆಯವರೆಗೆ ಸಮಯ ಅವಕಾಶ ಇತ್ತು ಅದರೊಳಗೆ ರಾಜ್ಯಪಾಲ ಕೋಸಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆ.












