ಸೌಮ್ಯತೆಯು ಹೃದಯದ ಹಾದಿಗಳನ್ನು ತೆರೆಯುತ್ತದೆ

0
2

✍️ ನುಸ್ರತ್ ಎಚ್

ಜನರು ಗೌರವದಿಂದ ಝೈನುಲ್ ಆಬಿದೀನ್ ಎಂದು ಕರೆಯುತ್ತಿದ್ದ ಹಝ್ರತ್‌ ಅಲಿ(ರ) ಅವರ ಮೊಮ್ಮಗನಾದ,  ಅಲಿ ಇಬ್ನು ಹುಸೈನ್(ರ) ರವರಿಗೆ ಸಂಬಂಧಿಸಿದ ಒಂದು ಪ್ರಸಿದ್ಧ ಘಟನೆಯಿದೆ. ಒಬ್ಬ ವ್ಯಕ್ತಿಯು ಅವರನ್ನು ತೀವ್ರವಾಗಿ ನಿಂದಿಸಿದನು. ಎಲ್ಲವನ್ನೂ ಕೇಳಿದ ನಂತರ ಅವರು ಸೌಮ್ಯವಾಗಿ ಹೀಗೆ ಪ್ರತಿಕ್ರಿಯಿಸಿದರು: “ನೀವು ಹೇಳಿದ ವಿಷಯಗಳು ನನ್ನಲ್ಲಿ ಇದ್ದರೆ, ಅಲ್ಲಾಹನು ನನಗೆ ಕ್ಷಮಿಸಲಿ. ನೀವು ಹೇಳಿದ ವಿಷಯಗಳು ನನ್ನಲ್ಲಿ ಇಲ್ಲದಿದ್ದರೆ, ಅಲ್ಲಾಹನು ನಿಮಗೆ ಕ್ಷಮಿಸಲಿ.”

ಆ ಮಾತುಗಳಲ್ಲಿದ್ದ ಆ ಸೌಮ್ಯತೆಯ ಮುಂದೆ ಟೀಕಾಕಾರನ ಒಳಗಿದ್ದ ದ್ವೇಷದ ಬೆಂಕಿ ಆರಿಹೋಯಿತು. ತಪ್ಪಿನ ಅರಿವಾಗಿ ಅವನ ಕಣ್ಣುಗಳಲ್ಲಿ ನೀರು ತುಂಬಿ ಬಂತು. ಸ್ವಲ್ಪ ಮುಂಚೆಯಷ್ಟೇ ಆಕ್ಷೇಪಾರ್ಹ ಮಾತುಗಳಿಂದ ತುಂಬಿದ್ದ ನಾಲಿಗೆಯಲ್ಲಿ ನಂತರ ಪಶ್ಚಾತ್ತಾಪದ ಕ್ಷಮೆಯಾಚನೆ ಮೂಡಿತು.

ಸೌಮ್ಯತೆಯ ಸುಂದರ ಮತ್ತು ಶಕ್ತಿಯುತವಾದ ಈ ಸ್ವಭಾವವೇ, “ನಿಮ್ಮ ಮಾತುಗಳನ್ನು ಎತ್ತರಿಸಿ, ಧ್ವನಿಯನ್ನಲ್ಲ. ಹೂವುಗಳನ್ನು ಬೆಳೆಸುವುದು ಮಳೆಯೇ ಹೊರತು ಗುಡುಗಲ್ಲ” ಎಂದು ರೂಮಿಯವರು ತಮ್ಮ ಕವನದಲ್ಲಿ ಲಿಖಿತಗೊಳಿಸಿದ್ದಾರೆ.

ಅದ್ಭುತವಾದ ಫಲಗಳನ್ನು ನೀಡಲು ಸಾಧ್ಯವಾಗುವ ಅತಿ ಮಹತ್ತರವಾದ ಗುಣವೇ ಸೌಮ್ಯತೆ. ಭಾವನಾತ್ಮಕ ಪರಿಪಕ್ವತೆಯ ಮತ್ತು ಆತ್ಮನಿಯಂತ್ರಣದ ಉನ್ನತವಾದ ಭಾವ ಇದು. ಮೃದುತ್ವ ತುಂಬಿದ ಮಾತುಗಳಾಗಿಯೂ, ಆರಾಧನಾಪೂರ್ವಕವಾದ ನಡವಳಿಕೆಯಾಗಿಯೂ, ಕಾರುಣ್ಯ ಮತ್ತು ಕ್ಷಮೆಯಾಗಿಯೂ, ಆದರವಾಗಿಯೂ ಚಿಮ್ಮುವ ಒರತೆಯದು. ನಿರಂತರವಾಗಿ ಹರಿಯುವ ನೀರಿನಲ್ಲಿ ಕಠಿಣವಾದ ಬಂಡೆಗಳು ನಯವಾಗುವಂತೆ, ಮಾನವ ಹೃದಯಗಳಲ್ಲಿನ ಕಠಿಣ ಭಾವನೆಗಳನ್ನು ಸೌಮ್ಯತೆ ಮಾರ್ಪಡಿಸುತ್ತದೆ.

ಒಂದು ಕಥೆ ನೆನಪಿನಲ್ಲಿ ಮೂಡುತ್ತದೆ: ಒಂದು ಗ್ರಾಮೀಣ ಪ್ರದೇಶ. ಅಲ್ಲೊಂದು ಸಣ್ಣ ಆಸ್ಪತ್ರೆ. ಒಮ್ಮೆ ಒಬ್ಬರು ತನ್ನ ಅನಾರೋಗ್ಯ ಪೀಡಿತರಾದ ತಂದೆಯೊಂದಿಗೆ ಆಸ್ಪತ್ರೆಗೆ ಬಂದರು. ವೈದ್ಯರು ಅಲ್ಲಿಗೆ ತಲುಪುವಾಗ ಸ್ವಲ್ಪ ತಡವಾಯಿತು, ಚಿಕಿತ್ಸೆ ತಡವಾಯಿತು ಎಂದು ವೈದ್ಯರ ಬಳಿ ಮಗ ಕೋಪಗೊಂಡನು. ಅವರೊಂದಿಗೆ ಕೋಪದಿಂದ ಮಾತನಾಡಿದನು. ವೈದ್ಯರು ಅವನನ್ನು ಸಮಾಧಾನಪಡಿಸುತ್ತಾ ಸೌಮ್ಯವಾಗಿ ಹೀಗೆ ಹೇಳಿದರು: “ನಿಮ್ಮ ಮಾನಸಿಕ ಸ್ಥಿತಿ ನನಗೆ ಅರ್ಥವಾಗುತ್ತದೆ. ಸಾಧ್ಯವಿರುವ ಎಲ್ಲಾ ಚಿಕಿತ್ಸೆಯನ್ನು ತಂದೆಗೆ ನೀಡೋಣ. ಸಮಾಧಾನದಿಂದಿರಿ.” ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲೂ ಅದೇ ಸೌಮ್ಯತೆಯನ್ನು ವೈದ್ಯರು ಕಾಯ್ದುಕೊಂಡರು. ತಂದೆಯ ಆರೋಗ್ಯ ಸುಧಾರಿಸಿತು. ಡಿಸ್ಚಾರ್ಜ್ ಸಮ್ಮರಿ ಪಡೆಯಲು ನರ್ಸ್ ಬಳಿಗೆ ಬಂದ ಮಗ ಕೇಳಿದ: “ನಾನು ತುಂಬಾ ಕೋಪದಿಂದ ಕಠಿಣವಾಗಿ ನಡೆದುಕೊಂಡರೂ ವೈದ್ಯರು ಹೇಗೆ ಇಷ್ಟೊಂದು ಸೌಮ್ಯವಾಗಿ ಮಾತನಾಡಲು ಸಾಧ್ಯವಾಯಿತು?” ಅವರು ಹೇಳಿದರು: “ನಿಜವಾಗಿ ಅವರ ತಂದೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಆಸ್ಪತ್ರೆಯಿಂದ ತುರ್ತು ಕರೆ ಬಂತು. ರೋಗಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಅವರು ಓಡಿಬಂದಿದ್ದರು.”

ಇದ್ದನ್ನು ಕೇಳಿ ತನ್ನ ಅವಿವೇಕತನವನ್ನು ನೆನೆದು ಆ ವ್ಯಕ್ತಿ ಕಣ್ಣೀರಿಟ್ಟನು. ವೈದ್ಯರ ಪರಿಸ್ಥಿತಿ ಏನಿತ್ತು ಎಂದು ಅರ್ಥಮಾಡಿಕೊಳ್ಳುವ ಒಂದು ನಿಮಿಷದ ತಾಳ್ಮೆ ನನಗಿರಲಿಲ್ಲವಲ್ಲ ಎಂದು ನೋವಿನಿಂದ ಆತ ನೆನೆದನು.

ಸೌಮ್ಯತೆ ಎಂದರೆ ಕೇವಲ ಕಠೋರ ಮಾತುಗಳನ್ನು ಆಡದಿರುವುದು ಮಾತ್ರವಲ್ಲ; ಇತರರನ್ನು ಅರಿಯುವುದು, ಅರ್ಥಮಾಡಿಕೊಳ್ಳುವುದು ಮತ್ತು ಸ್ವೀಕರಿಸುವುದು ಆಗಿದೆ. ದಾಂಪತ್ಯವಾಗಲಿ, ಸಹೋದರತ್ವವಾಗಲಿ, ಸ್ನೇಹವಾಗಲಿ—ಯಾವುದೇ ಸಂಬಂಧವನ್ನು ಶಕ್ತಿಯುತ, ಸೌಹಾರ್ದಯುತ ಹಾಗೂ ಭಾವನಾತ್ಮಕ ಸುರಕ್ಷತೆಯ ವಾತಾವರಣವಾಗಿ ಕುಟುಂಬಕ್ಕೂ ಸಮಾಜಕ್ಕೂ ಒದಗಿಸಲು ಸೌಮ್ಯತೆಯಿಂದ ಸಾಧ್ಯವಾಗುತ್ತದೆ.

ಈ ಗುಣವನ್ನು ಮೈಗೂಡಿಸಿಕೊಂಡವರಲ್ಲಿ ಉಂಟಾಗುವ ಧಾರ್ಮಿಕವಾದ ನೈತಿಕ ಫಲಗಳು ಅಪಾರ. ಸೌಮ್ಯತೆ ಬಾಹ್ಯ ನಡವಳಿಕೆಯಲ್ಲಿ ಮಾತ್ರವಲ್ಲದೆ ಆಧ್ಯಾತ್ಮಿಕ ಭಾವವೂ ಆಗಿ ಮಾರ್ಪಟ್ಟಾಗ ಮನಸ್ಸು ಶಾಂತವೂ ಸುಂದರವೂ ಆಗುತ್ತದೆ.

ಸೌಮ್ಯತೆ ಎಂಬ ಗುಣ ಒಬ್ಬರಲ್ಲಿ ನೆಲೆಸಿದಾಗ ಕೋಪ, ಕಠೋರತೆ, ಅಹಂಕಾರ, ದ್ವೇಷ, ಅಸಹಿಷ್ಣುತೆ, ದುಡುಕುತನ, ಕ್ರೂರತೆ, ಜಗಳವಾಡುವ ಪ್ರವೃತ್ತಿ ಮುಂತಾದ ದುರ್ಗುಣಗಳು ಇಲ್ಲದಾಗುತ್ತವೆ. ಕ್ಷಮೆ, ಕಾರುಣ್ಯ, ವಿನಯ, ನಮ್ರತೆ, ಸಹಿಷ್ಣುತೆ, ಆತ್ಮನಿಯಂತ್ರಣ, ಪ್ರೀತಿ, ವಿವೇಕ, ಶಾಂತಿಪ್ರಿಯತೆ ಮುಂತಾದ ಸದ್ಗುಣಗಳು ಅವರಲ್ಲಿ ಪುಷ್ಟಿಗೊಳ್ಳುತ್ತವೆ.

ಇಂತಹವರ ಉಪಸ್ಥಿತಿಯು ಇತರರಲ್ಲೂ ಭರವಸೆ ಮತ್ತು ಆನಂದವನ್ನು ಉಂಟುಮಾಡುತ್ತದೆ. ಜೀವನದ ಸುಂದರ ಶೈಲಿ ಹಾಗೂ ವಿಶಾಲವಾದ, ಆರೋಗ್ಯಕರ ಸಂಬಂಧಗಳು ಉಂಟಾಗುತ್ತವೆ. ಹೃದಯಗಳನ್ನು ಜೋಡಿಸುವ ಒಂದು ಮಾಂತ್ರಿಕ ಸ್ಪರ್ಶವಿರುವ ಗುಣವೇ ಸೌಮ್ಯತೆ. ಅಹಂಕಾರದ ಸಾಕಾರರೂಪವಾದ ಫಿರ್‌ಔನ್ ಜೊತೆಗಿನ ಸಂವಾದದಲ್ಲೂ ಸೌಮ್ಯವಾದ ಮಾತುಗಳನ್ನೇ ಆಡಬೇಕೆಂದು ಪ್ರವಾದಿ ಮೂಸಾ(ರ) ರಿಗೆ ಕಟ್ಟುನಿಟ್ಟಾಗಿ ಹೇಳಲಾಗಿದೆ (ಕುರ್‌ಆನ್ 20:44). ಸಾಧಾರಣ ಸಂಭಾಷಣೆಯಿಂದ ಹಿಡಿದು ಧರ್ಮಪ್ರಚಾರದಂತಹ ಗಂಭೀರ ವಿಷಯಗಳವರೆಗೆ ಇದು ಅನ್ವಯಿಸುತ್ತದೆ.

ಪ್ರವಾದಿ(ಸ) ಅವರ ಈ ಗುಣವಿಶೇಷವನ್ನು ಪವಿತ್ರ ಕುರ್‌ಆನ್ ಹೀಗೆ ಬಣ್ಣಿಸುತ್ತದೆ: “(ಓ ಪೈಗಂಬರರೇ,) ನೀವು ಇವರ ಪಾಲಿಗೆ ಅತ್ಯಂತ ಸೌಮ್ಯ ಸ್ವಭಾವಿಯಾಗಿರುವುದು ಅಲ್ಲಾಹನ ಮಹಾ ಕೃಪೆಯಾಗಿದೆ. ನೀವು ಕಠಿಣ ಸ್ವಭಾವಿ ಮತ್ತು ಕಲ್ಲೆದೆಯವರಾಗಿರುತ್ತಿದ್ದರೆ ಇವರೆಲ್ಲರೂ ನಿಮ್ಮ ಸುತ್ತಮುತ್ತಲಿನಿಂದ ಚದರಿ ಹೋಗುತ್ತಿದ್ದರು.” (ಆಲಿ ಇಮ್ರಾನ್: 159). ಹತ್ತು ವರ್ಷಗಳ ಕಾಲ ಪ್ರವಾದಿಯವರ ಸೇವೆ ಮಾಡಿ ಜೊತೆಯಲ್ಲಿದ್ದರೂ, ಒಂದು ಮಾತನ್ನೂ ಕಠಿಣವಾಗಿ ತಮ್ಮೊಡನೆ ಆಡಿರಲಿಲ್ಲ ಎಂಬ ಅನಸ್(ರ) ಅವರ ಸಾಕ್ಷ್ಯವೇ ಪ್ರವಾದಿಯವರಲ್ಲಿದ್ದ ಸೌಮ್ಯತೆಯ ಆಳವನ್ನು ತಿಳಿಸಲು ಸಾಕು. ಅವರ ಆ ಸೌಮ್ಯತೆಯ ವೈಶಾಲ್ಯತೆಯು ಮೂಕ ಪ್ರಾಣಿಗಳನ್ನು ಸಹ ಒಳಗೊಂಡಿತ್ತು.