ಆರ್‌ಟಿಐ: ಮಾಹಿತಿ ನೀಡದಿದ್ದಕ್ಕೆ 10 ಸಾವಿರ ದಂಡ ಸಹಿತ ಪ್ರಕರಣ ದಾಖಲಿಸಲು ಆದೇಶ

0
905

ಸನ್ಮಾರ್ಗ ವಾರ್ತೆ

ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಪಂಚಾಯತಿಯಲ್ಲಿ 2016ರ ಮಾರ್ಚ್ ತಿಂಗಳಿನಂದು ಆರ್‌ಟಿಐ ಕೇಳಿದ ಮಾಹಿತಿಯನ್ನು ನೀಡದೆ ಇರುವ ಹಿನ್ನಲೆಯಲ್ಲಿ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಹೆಚ್.ಪಿ ಸುಧಾಮ್‍ದಾಸ್ ರವರು 10000 ಜುಲ್ಮಾನೆ ಮತ್ತು ಸಂಬಂದ ಪಟ್ಟವರ ವಿರುದ್ದ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲು ಆದೇಶಿಸಿದ್ದಾರೆ.

ಶ್ರೀನಿವಾಸಪುರ ಪಟ್ಟಣದ ನಿವಾಸಿ ಆರ್.ಟಿ.ಐ ಕಾರ್ಯಕರ್ತ ಶಬ್ಬೀರ್ ಅಹಮ್ಮದ್ ರವರು ಮಾಹಿತಿ ಹಕ್ಕು 2005 ರಂತೆ ಪ್ರಾರಂಭಿಕ ಶುಲ್ಕ ಪಾವತಿಸಿ ತಾಲೂಕು ಪಂಚಾಯತಿ ಕಾರ್ಯಾಲಯಕ್ಕೆ ದಿನಾಂಕ 2016ರ ಮಾರ್ಚ್ 19ರಂದು ಅರ್ಜಿ ಸಲ್ಲಿಸುವ ಮೂಲಕ, ತಾಲೂಕು ಪಂಚಾಯಿತಿ ಸ್ಟಾಂಪ್ ಡ್ಯೂಟಿ ಅಡಿಯಲ್ಲಿ ಖರ್ಚು-ವೆಚ್ಚ ಸೇರಿದಂತೆ ಕೆಲವೊಂದು ದಾಖಲೆಗಳನ್ನು ಕೇಳಿದ್ದರು.

ಆದರೆ, ಮಾಹಿತಿ ನೀಡದೆ ಇರುವ ಹಿನ್ನಲೆಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ವಿರುದ್ಧ ಪ್ರಥಮ ಮೇಲ್ಮನವಿಯನ್ನು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಗೆ 2016 ಎಪ್ರೀಲ್ 20 ರಂದು ಅಧಿನಿಯಮದ ಕಲಂ 19(1) ರ ಅನ್ವಯ ಸಲ್ಲಿಸಲಾಗಿತ್ತಾದರೂ ಸಂಬಂಧಪಟ್ಟ ಮಾಹಿತಿಯನ್ನು ಒದಗಿಸುವಲ್ಲಿ ವಿಫಲರಾಗಿದ್ದರು.

ಈ ಸಂಬಂಧ ರಾಜ್ಯ ಮಾಹಿತಿ ಆಯೋಗಕ್ಕೆ ಕಲಂ 19(3)ರ ಅನ್ವಯ 2ನೇ ಮೇಲ್ಮನವಿಯನ್ನು ಸಲ್ಲಿಸಲಾಗಿ 2017ರ ಮೇ. 21 ರಂದು ವಿಚಾರಣೆ ಕೈಗೆತ್ತಿಕೊಂಡ ಆಯೋಗವು ಹಲವು ಬಾರಿ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರೂ ಪ್ರಯೋಜನವಾಗದ ಕಾರಣ ತಾಲೂಕು ಪಂಚಾಯತಿಯ ಅಂದಿನ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ ಆನಂದಾಚಾರಿ ಇವರಿಗೆ ಆಯೋಗವು ದಿನಾಂಕ 2019ರ ಮಾರ್ಚ್ 27 ರಂದು 10000 ರೂಪಾಯಿಗಳ ದಂಡ ವಿಧಿಸಿ ಆದೇಶ ನೀಡಿತ್ತು ಹಾಗೂ ಈ ಸಂಬಂಧಪಟ್ಟ ಅರ್ಜಿದಾರರಿಗೆ ಕೇಳಿರುವ ಮಾಹಿತಿ ಕೊಡಲು ಆದೇಶಿಸಿದ್ದರೂ ಮಾಹಿತಿ ನೀಡಿರುವುದಿಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟಂಬರ್ ತಿಂಗಳಲ್ಲಿ ವಿಚಾರಣೆಗ ಕೈಗೆತ್ತಿಕೊಂಡ ಆಯೋಗವು ಮಾಹಿತಿ ನೀಡಲು ವಿಫಲರಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ದಾಖಲೆಗಳ ಕಾಯ್ದೆ (ಕರ್ನಾಟಕ ಪಬ್ಲಿಕ್ ರೆಕಾರ್ಡ್ ಆಕ್ಟ್ 2010 ಮತ್ತು ಕರ್ನಾಟಕ ಪಬ್ಲಿಕ್ ರೆಕಾರ್ಡ್ ರೂಲ್ಸ್ 2013ರ) ಅನ್ವಯ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮಾಹಿತಿ ಆಯುಕ್ತರಾದ ಹೆಚ್.ಪಿ.ಸುಧಾಮ್‍ದಾಸ್‌ರವರು ಆದೇಶಿಸಿದ್ದಾರೆ. ಸದರಿ ಸ್ಟಾಂಪ್ ಡ್ಯೂಟಿ ಹಣ ದುರುಪಯೋಗ ಆಗಿರುವ ಸಾಧ್ಯತೆಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ದಾಖಲೆ ನೀಡುವಲ್ಲಿ ತಾಲೂಕು ಪಂಚಾಯತಿ ಅಧಿಕಾರಿಗಳು ವಿಫಲವಾಗಿದ್ದು, ಪೊಲೀಸ್ ತನಿಖೆಯಿಂದಲೇ ಸತ್ಯಾಂಶ ಹೊರಬಿಳಬೇಕಾಗಿದೆ.