ಪೌರತ್ವ ಮಸೂದೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಮುಸ್ಲಿಂ ಲೀಗ್: ಕಪಿಲ್ ಸಿಬಲ್ ಜೊತೆ ಚರ್ಚೆ

0
1961

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 11: ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯ ತೋರಿಸುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಮುಸ್ಲಿಂ ಲೀಗ್ ಕಾನೂನು ಕ್ರಮಕ್ಕೆ ಮುಂದಾಗಿದೆ. ರಾಜ್ಯಸಭೆಯಲ್ಲಿ ಮಸೂದೆ ಪಾಸಾದರೆ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸುವುದಕ್ಕೆ ಮುಸ್ಲಿಂ ಲೀಗ್ ಚಿಂತನೆ ನಡೆಸಿದೆ. ಮುಸ್ಲಿಂ ಲೀಗ್ ಪಾರ್ಲಿಮೆಂಟ್ ನಾಯಕ ಕುಂಞಲಿಕುಟ್ಟಿ ನೇತೃತ್ವದಲ್ಲಿ ಲೀಗ್ ನಾಯಕರ ತಂಡ ಮಂಗಳವಾರ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್‍ರೊಂದಿಗೆ ಚರ್ಚಿಸಿತು.

ಸಿಬಲ್‍ರ ಕಚೇರಿಯಲ್ಲಿ ಈ ಭೇಟಿ ನಡೆಯಿತು. ಪೌರತ್ವ ಮಸೂದೆಯು ಸಂವಿಧಾನ ನೀಡುವ ಮೂಲಭೂತ ಹಕ್ಕಿನ ಉಲ್ಲಂಘನೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸರಕಾರಕ್ಕೆ ಲೋಕಸಭೆಯಲ್ಲಿ ಬಹುಮತ ಇದೆ. ಅಲ್ಲಿ ಪ್ರತಿಪಕ್ಷಗಳು ವಿರೋಧಿಸಿದ್ದವು. ಕಪಿಲ್ ಸಿಬಲ್‍ರೊಂದಿಗೆ ಮುಹಮ್ಮದ್ ಬಶೀರ್, ಪಿವಿ ಅಬ್ದುಲ್ ವಹಾಬ್, ನವಾಝ್ ಗನಿ, ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯದರ್ಶಿ ಖುರಂ ಅಝೀಝ್ ಉಮರ್, ಸುಪ್ರೀಂಕೋರ್ಟು ವಕೀಲ ಅಡ್ವೊಕೇಟ್ ಹಾರಿಸ್ ಬೀರಾನ್ ಚರ್ಚೆಯಲ್ಲಿ ಭಾಗವಹಿಸಿದ್ದರು.