ಝಾರ್ಖಂಡ್ ಫಲಿತಾಂಶದ ಬಳಿಕದ ಬಿಜೆಪಿ ಹೇಗಿದೆ? ದೇಶದಲ್ಲಿ ಮೂರನೇ ಒಂದು ಭಾಗಕ್ಕೆ ಕುಸಿಯಿತೇಕೆ?

0
608

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 24: ಒಂದರ ನಂತರ ಒಂದರಂತೆ ಪಕ್ಷಾಂತರ ಇತ್ಯಾದಿಗಳಿಂದ ಭಾರತದಲ್ಲಿ ಹಲವು ರಾಜ್ಯಗಳ ಅಧಿಕಾರವನ್ನು ಪಡೆದಿದ್ದ ಬಿಜೆಪಿ ಕೇವಲ ಒಂದೂವರೆ ವರ್ಷದ ಹಿಂದೆ ಭಾರತದ ಬಹುಭಾಗ ಪ್ರದೇಶಗಳಲ್ಲಿ ಅಧಿಕಾರದಲ್ಲಿತ್ತು. ಝಾರ್ಕಂಡಿನಲ್ಲಿ ಬಿಜೆಪಿಯ ಹೀನಾಯ ಸೋಲಿನೊಂದಿಗೆ ಅದು ದೇಶದಲ್ಲಿ ಮೂರನೇ ಒಂದು ಭಾಗದಲ್ಲಿ ಮಾತ್ರ ಎಂಬಲ್ಲಿಗೆ ಕುಸಿತ ಕಂಡಿದೆ. ರಾಜ್ಯಸಭೆಯಲ್ಲಿ ಮೂರರಲ್ಲಿ ಎರಡು ಬಹುಮತ ಪಡೆಯುವ ಕನಸಿಗೆ ಝಾರ್ಕಂಡಿನ ಸೋಲು ದೊಡ್ಡ ಹೊಡೆತವಾಗಿದೆ.

ಜಾರ್ಖಂಡಿನಲ್ಲಿ ಆಡಳಿತ ವಿರೋಧವನ್ನು ಮೀರಿ ನಿಲ್ಲಲು ಮೋದಿ, ಅಮಿತ್ ಶಾರನ್ನು ಪ್ರಚಾರಕ್ಕೆ ಕರೆತಂದರೂ ಮತ್ತು ಇಬ್ಬರೂ ಕಾಶ್ಮೀರ, ರಾಮಮಂದಿರ ವಿಷಯಗಳನ್ನು ಮತ್ತು ಕೊನೆಗೆ ಪೌರತ್ವ ತಿದ್ದುಪಡಿ ಚರ್ಚೆಯನ್ನು ಮಾಡಿದರೂ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಬಿಜೆಪಿಯ 37ನೇ ಸಖ್ಯ ವಾದ ಆಲ್ ಝಾರ್ಕಂಡ್ ಸ್ಟೂಡೆಂಟ್ಸ್ ಯೂನಿಯನ್‍ನ ಐವರನ್ನು ಸೇರಿಸಿ ಕಷ್ಟದಲ್ಲಿ ಬಹುಮತ ಗಳಿಸಿ ಅಧಿಕಾರ ಪಡೆದ ಬಿಜೆಪಿಯನ್ನು ಅಂದು ಬುಡಕಟ್ಟು ಜನರು ಬೆಂಬಲಿಸಿದ್ದರು. ಈ ಬಾರಿ ಬುಡಕಟ್ಟು ಪ್ರದೇಶದ ಶೇ. 53ರಷ್ಟು ಮತಗಳು ಬಿಜೆಪಿಯ ವಿರುದ್ಧ ಬಿದ್ದಿದೆ. ಇವು ಕಾಂಗ್ರೆಸ್, ಜೆಎಂಎಂ, ಆರ್‍ಜೆಡಿಯ ಜೇಬಿಗೆ ಬಿದ್ದಿವೆ.

ಮಧ್ಯಪ್ರದೇಶ, ಛತ್ತೀಸ್‍ಗಡ, ರಾಜಸ್ಥಾನಗಳನ್ನು ಲೋಕಸಭಾ ಚುನಾವಣೆಯ ಮೊದಲು ಬಿಜೆಪಿ ಕಳಕೊಂಡಿತ್ತು. ನಂತರ ಮಹಾರಾಷ್ಟ್ರ, ಹರಿಯಾಣಗಳಲ್ಲಿ ಹಿನ್ನಡೆಯಾಯಿತು. ಮೂವತ್ತು ವರ್ಷದ ಮೈತ್ರಿಯನ್ನು ಶಿವಸೇನೆ ಮಹಾರಾಷ್ಟ್ರದಲ್ಲಿ ಕಡಿದುಕೊಂಡು ಎನ್‍ಸಿಪಿ, ಕಾಂಗ್ರೆಸ್‍ನ ಜೊತೆ ಸೇರಿತು. ಹರಿಯಾಣದಲ್ಲಿ ಬಹುಮತ ಸಿಗದಿದ್ದರೂ ಈಗ ಕಷ್ಟಪಟ್ಟು ಆಡಳಿತದಲ್ಲಿ ಕೂತಿದೆ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸರಕಾರದಲ್ಲಿ ಕೂತುಕೊಳ್ಳುವ ಅವಕಾಶವನ್ನು ಕಳೆದುಕೊಂಡಿತು. ಝಾರ್ಕಂಡಿನ ಸೋಲು ದೊಡ್ಡ ಹಿನ್ನಡೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿವೆ. ಝಾರ್ಕಂಡಿನೊಂದಿಗೆ ಗಡಿ ಹೊಂದಿರುವ ಬಿಹಾರ ಮತ್ತು ಪಶ್ಚಿಮಬಂಗಾಳದಲ್ಲಿ ಮುಂದೆ ಚುನಾವಣೆಯನ್ನು ಎದುರಿಸಬೇಕಾಗಿದೆ. ಇಲ್ಲಿ ಅದು ಅಸ್ತಿತ್ವ ಕಳಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ.

ಆರು ತಿಂಗಳ ಹಿಂದೆ 303 ಸಂಸದರನ್ನು ಗೆದ್ದ ಬಿಜೆಪಿ ಹಿಂದುತ್ವದ ಅಜೆಂಡಾಗಳನ್ನು ಯುದ್ಧ ಕಾಲದಂತೆ ಜಾರಿಗೊಳಿಸಿತು. ಹಿಂದಿ ಹೃದಯ ಭೂಮಿಯಲ್ಲಿ ಬಿಜೆಪಿ ಈಗ ಕಾಲು ಮುರಿದುಕೊಂಡಿದೆ. ಪೌರತ್ವ ಕಾನೂನು, ಎನ್‍ಆರ್‍ಸಿ ವಿರುದ್ಧ ದೇಶವೇ ಹೋರಾಟದಲ್ಲಿದೆ. ಝಾರ್ಕಂಡಿನ ಪ್ರಹಾರ ಮೋದಿ, ಅಮಿತ್‍ಶಾರನ್ನು ಸುಲಭದಲ್ಲಿ ಚೇತರಿಸಲು ಬಿಡಲಾರದು. ಅಯೋಧ್ಯೆಯ ರಾಮಮಂದಿರದಲ್ಲಿ ಸುಪ್ರೀಂಕೋರ್ಟಿನ ತೀರ್ಪು ಬಿಜೆಪಿಗೆ ಅನುಕೂಲಕರವಾಗಿತ್ತು. ಆದರೆ, ಅದು ಕೂಡ ಬಿಜೆಪಿಗೆ ಲಾಭ ತರಲಿಲ್ಲ. ಅದನ್ನು ಹಿಡಿದು ಝಾರ್ಕಂಡಿಗೆ ಹೋದ ಅಮಿತ್ ಶಾರಿಗೆ ಮುಖಭಂಗವಾಗಿದೆ. ಸರಕಾರ ವಿರೋಧಿ ಮತಗಳನ್ನು ಒಡೆಯಲು ಮಾಜಿ ಬಿಜೆಪಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿಯ ಜೆವಿಎಸ್‍ಗೆ ಜನರು ಮತ್ತು ಹಣವನ್ನು ಬಿಜೆಪಿ ನೀಡಿದರೂ ಪ್ರಯೋಜನ ಆಗಿಲ್ಲ. ಆರೆಸ್ಸೆಸ್ ತಂತ್ರ ಫಲಕಾರಿಯಾಗಲಿಲ್ಲ. ಬಹುಮತ ಸಿಗದಿದ್ದರೆ ಬಾಬುಲಾಲ್ ಮರಾಂಡಿಯನ್ನು ಮುಖ್ಯಮಂತ್ರಿ ಮಾಡುವ ಲೆಕ್ಕವೂ ಇತ್ತು. ಆರೆಸ್ಸೆಸ್‍ನೊಂದಿಗೆ ಅಂತಹ ಸಂಪರ್ಕ ಇರುವವರು ಮರಾಂಡಿಯಾಗಿದ್ದಾರೆ.

ಝಾರ್ಕಂಡಿನಲ್ಲಿ ಐದು ವರ್ಷ ಆಳಿದ ವ್ಯಕ್ತಿ ರಘುಬರ್ ದಾಸ್. 70ರ ದಶಕದಲ್ಲಿ ರೈಲು ಸ್ಟೀಲ್ ಪ್ಲಾಂಟಿನ ಕಾರ್ಮಿಕರಾಗಿದ್ದರು. ಎಲ್ ಕೆ ಅಡ್ವಾಣಿ ಅವರನ್ನು ಶಾಸಕರಾಗಿಸಿದ್ದರು. ಮೋದಿ, ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಕೂರಿಸಿದರು. ಒಬ್ಬ ಕಾರ್ಮಿಕನಿಗೆ ಮುಖ್ಯಮಂತ್ರಿಯಾಗಲು ಸಾಧ್ಯವಿರುವ ಪಾರ್ಟಿ ಎಂದು ಪ್ರಚಾರ ಮಾಡಿದರು. ರಘುಬರ್ ದಾಸ್ ರ ತಂದೆ ಚಮನ್ ರಾಂ ಕಾರ್ಮಿಕರಾಗಿದ್ದರು. ಅವೆಲ್ಲ ಮರೆತು ರಘು ಬರದಾಸ್ ಬುಡಕಟ್ಟು ಆದಿವಾಸಿ ಜನರ ಭೂಮಿಯನ್ನು ಕಿತ್ತುಕೊಂಡು ಹೊರಹಾಕಲು ಹೊರಟರು. ಅನೇಕ ಕಾನೂನು ತಂದರು. ಇವೆಲ್ಲದ್ದರ ಪರಿಣಾಮ ಜೆಎಂಎಂ ನೇತೃತ್ವದ ಸರಕಾರ ಅಲ್ಲಿ ಅಧಿಕಾರಕ್ಕೆ ಬರುತ್ತಿದೆ.