ಧರ್ಮ ಮತ್ತು ರಾಜಕೀಯ ಮಿಶ್ರಣ ತಪ್ಪು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡದ್ದೂ ತಪ್ಪು- ಉದ್ಧವ್ ಠಾಕ್ರೆ

0
891

ಸನ್ಮಾರ್ಗ ವಾರ್ತೆ-

ನಾಗಪುರ, ಡಿ. 24: ಧರ್ಮವನ್ನು ರಾಜಕೀಯಕ್ಕೆ ಮಿಶ್ರಣ ಮಾಡಿದ್ದು ಮತ್ತು ಬಿಜೆಪಿಯೊಂದಿಗೆ ಸೇರಿದ್ದು ಶಿವಸೇನೆಯಿಂದಾದ ತಪ್ಪು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಹಿರಂಗವಾಗಿ ಹೇಳಿದ್ದಾರೆ. ಕಳೆದವಾರ ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿಯ ವಿರುದ್ಧ ಉದ್ಧವ್ ಠಾಕ್ರೆ ಬಹಿರಂಗವಾಗಿ ಮಾತನ್ನಾಡಿದ್ದರು. ಶಿವಸೇನೆಯ ವಿಚಾರಧಾರೆಯ ವಿರುದ್ಧ ಕಾಂಗ್ರೆಸ್, ಎನ್ ಸಿ ಪಿ ಮೈತ್ರಿ ಮಾಡಲಾಗಿದೆ ಎಂದು ಬಿಜೆಪಿ ನಾಯಕ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಆರೋಪಿಸಿದ್ದಕ್ಕೆ ಉತ್ತರವಾಗಿ ಅವರು ಹೀಗೆ ಹೇಳಿದರು. ವಿರುದ್ಧ ಆಶಯದ ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್ ಮತ್ತು ಪಿಡಿಪಿಯೊಂದಿಗೆ ಬಿಜೆಪಿಯ ಸಖ್ಯ ಮಾಡಿಕೊಂಡಿರುವುದನ್ನು ಬೆಟ್ಟು ಮಾಡಿ ತೋರಿಸಿದ ಠಾಕರೆ ಧರ್ಮ ರಾಜಕೀಯದ ಮಿಶ್ರಣ ಮತ್ತು ಬಿಜೆಪಿಯೊಂದಿಗೆ ಸಖ್ಯ ತಪ್ಪಾಗಿತ್ತು ಎಂದು ಹೇಳಿದರು.

ಫಡ್ನವಿಸ್ ಜನರ ತೀರ್ಪಿನ ಕುರಿತು ಮಾತಾಡುತ್ತಾರೆ. ಆದರೆ ಇದು ರಾಜಕೀಯ, ರಾಜಕೀಯದಲ್ಲಿ ಧರ್ಮ ಮಿಶ್ರಣ ಮಾಡುವುದು ತಪ್ಪು. ಧರ್ಮಿಷ್ಟರು ಪಗಡೆಯಾಟದಲ್ಲಿ ಸೋತದ್ದನ್ನು ನಾವು ಮರೆತೆವು. ರಾಜಕೀಯ ಜೂಜಾಗಿದೆ. ಆದರೆ ಅದನ್ನು ಅದರ ಸ್ಥಾನದಲ್ಲಿ ನಿಲ್ಲಿಸಬೇಕು. ಆದರೆ ನಾವು ಅದನ್ನು ಮರೆತೆವು. ನಾವು 25 ವರ್ಷ ಜೊತೆಯಾಗಿ ಇದ್ದೆವು. ಅದು ಹಿಂದುತ್ವದ ಆಧಾರದಲ್ಲಾಗಿತ್ತು. ನಾವು ಧರ್ಮ ಬದಲಿಸಿಲ್ಲ. ಇಂದು ನಿನ್ನೆಯೂ ಮುಂದೆಯೂ ನಾವು ಹಿಂದೂಗಳೇ. ಆದರೆ ನಿಮ್ಮ ವಿಷಯ ಏನು? ವಿರೋಧಿ ಪಾಳಯದಲ್ಲಿದ್ದ ನಿತೀಶ್ ಕುಮಾರ್, ರಾಮ್ ವಿಲಾಸ ಪಾಸ್ವಾನ್, ಪಿಡಿಪಿಯೊಂದಿಗೂ ಸಖ್ಯ ಮಾಡಿದಿರಿ. ಧರ್ಮ ಹೇಳಲಿಕ್ಕಿರುವುದಲ್ಲ ಅನುಸರಿಸಲಿಕ್ಕಿರುವುದು. ಧರ್ಮ ಪುಸ್ತಕದಲ್ಲಿ ಮಾತ್ರವಲ್ಲ ಯಥಾರ್ಥ ಜೀವನದಲ್ಲಿ ಇರಬೇಕು ಎಂದು ಉದ್ಧವ್ ಠಾಕರೆ ಹೇಳಿದರು.

ನಮ್ಮ ಸರಕಾರ ರಿಕ್ಷಾದಲ್ಲಿ ಹೋಗಿ ಬರುವವರ ಜೊತೆಗಿದೆ. ಅಲ್ಲದೆ ಬುಲೆಟ್ ಟ್ರೈನ್ ನಲ್ಲಿ ಪ್ರಯಾಣಿಸುವವರಿಗಲ್ಲ ಎಂದು ಬಿಜೆಪಿಯನ್ನು ಅವರು ವ್ಯಂಗ್ಯವಾಡಿದರು.