ಮುಸ್ಲಿಮರಿಗೆ 150 ಇಸ್ಲಾಮಿಕ್ ದೇಶಗಳಿವೆ, ಹಿಂದುಗಳಿಗೆ ಇರುವುದು ಭಾರತ ಮಾತ್ರ- ಗುಜರಾತ್ ಮುಖ್ಯಮಂತ್ರಿ

0
824

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 25: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ವಿವಾದಾತ್ಮಕ ಹೇಳಿಕೆ ನೀಡಿದ್ದು ಮುಸ್ಲಿಮರು 150 ದೇಶಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಹಿಂದೂಗಳಿಗೆ ಇರುವುದು ಭಾರತ ಮಾತ್ರ ಎಂದು ಹೇಳಿದ್ದಾರೆ. ಗುಜರಾತಿನ ಸಬರಮತಿ ಆಶ್ರಮದ ಹೊರಗೆ ಪೌರತ್ವ ಕಾನೂನನ್ನು ಬೆಂಬಲಿಸುವವರ ರಾಲಿಯಲ್ಲಿ ಅವರು ಮಾತಾಡುತ್ತಿದ್ದರು.

ಪೌರತ್ವ ತಿದ್ದುಪಡಿ ಕಾನೂನಿನ ಕುರಿತು ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್ ಮತ್ತು ಮಹಾತ್ಮಾಗಾಂಧಿಯ ಆಗ್ರಹವನ್ನು ಕಾಂಗ್ರೆಸ್ ಗೌರವಿಸುವುದಿಲ್ಲ ಎಂದು ಅವರು ಆರೋಪಿಸಿದರು. 1947ರ ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಲ್ಲಿ ಶೇ. 22ರಷ್ಟು ಹಿಂದೂಗಳಿದ್ದರು. ಆದರೆ ಈಗ ನಿರಂತರ ದೌರ್ಜನ್ಯ, ಅತ್ಯಾಚಾರದಿಂದ ಅವರ ಜನಸಂಖ್ಯೆ ಕೇವಲ ಶೇ. 3ಕ್ಕಿಳಿದಿದೆ ಎಂದು ಅವರು ಹೇಳಿದರು. ಆದ್ದರಿಂದ ಅವರು ಭಾರತಕ್ಕೆ ಬರಲು ಬಯಸುತ್ತಿದ್ದಾರೆ, ಕಷ್ಟ ಪಡುವ ಹಿಂದೂಗಳಿಗೆ ಸಹಾಯ ಮಾಡಲು ಕಾಂಗ್ರೆಸ್ ಏನು ಮಾಡಿದೆ ಎಂದು ಅವರು ಪ್ರಶ್ನಿಸಿದರು. ಬಾಂಗ್ಲಾ ದೇಶದಲ್ಲಿ ಹಿಂದೂಗಳ ಸಂಖ್ಯೆ ಶೇ.2ಕ್ಕೆ ಕುಸಿದಿದೆ ಎಂದೂ ಅವರು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕೆಲವು ದಶಕಗಳಿಂದ ಎರಡು ಲಕ್ಷ ಹಿಂದೂ, ಸಿಖ್ ಜನಸಂಖ್ಯೆಯಿತ್ತು. ಈಗ ಕೇವಲ ಐನೂರು ಮಂದಿ ಇದ್ದಾರೆ. ಮುಸ್ಲಿಮರಿಗೆ ವಾಸಕ್ಕೆ 150 ಇಸ್ಲಾಮಿಕ್ ದೇಶಗಳಿವೆ. ಅವರು ಬೇಕಾದರೆ ಆ ದೇಶಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹಿಂದೂಗಳಿಗೆ ಇರುವುದು ಒಂದೇ ರಾಷ್ಟ್ರ- ಭಾರತವಾಗಿದೆ. ಇಲ್ಲಿಗೆ ಬರಲು ಬಯಸಿದರೆ ಅವರಿಗೆ ಏನು ಸಮಸ್ಯೆ ಇದೆ ಎಂದು ರೂಪಾಣಿ ಪ್ರಶ್ನಿಸಿದರು.