ಪ. ಬಂಗಾಳದಲ್ಲಿ ಎನ್ ಆರ್ ಸಿಗೆ ಒತ್ತಾಯಿಸುವುದಿಲ್ಲ; ತನ್ನದೇ ಈ ಹಿಂದಿನ ಮಾತನ್ನು ನುಂಗಿದ ಬಿಜೆಪಿ ಅಧ್ಯಕ್ಷ

0
882

ಸನ್ಮಾರ್ಗ ವಾರ್ತೆ-

ಕೊಲ್ಕತಾ, ಡಿ. 26: ರಾಷ್ಟ್ರೀಯ ಪೌರತ್ವ ಪಟ್ಟಿ (ಎನ್‍ಆರ್ ಸಿ)ಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿ ಮಾಡಲು ಒತ್ತಡ ಹೆರುವುದಿಲ್ಲ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೊಷ್ ಹೇಳಿದ್ದಾರೆ. ಎನ್ ಆರ್ ಸಿ ಭವಿಷ್ಯದ ವಿಷಯ. ದೇಶವ್ಯಾಪಕ ಎನ್‍ಆರ್ ಸಿ ಜಾರಿಗೊಳಿಸಲಾಗುವುದು ಎಂದು ಅವರು ಈ ಹಿಂದೆ ಹೇಳಿದ್ದರು. ಈಗ ಅದನ್ನು ಭವಿಷ್ಯದ ವಿಷಯ ಎಂದು ಹೇಳಿ ತನ್ನ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.

ಎನ್‍ಆರ್ ಸಿ ಯಾವಾಗ ತರಬೇಕು ಮತ್ತು ತಂದರೆ ಏನಾಗುತ್ತದೆ ಎನ್ನುವುದು ಮುಂದೆ ಚರ್ಚಿಸಬೇಕಾದ ವಿಷಯಗಳಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಅವರು ಹೇಳಿದರು. ಈ ಹಿಂದೆ ಅವರು ಎನ್ ಆರ್ ಸಿ ಅನಿವಾರ್ಯ ಎಂದಿದ್ದರು. ಅಸ್ಸಾಂಗೆ ಎನ್‍ಆರ್ ಸಿ ಬಂದಿದ್ದು ಸುಪ್ರೀಂಕೋರ್ಟಿನ ಆದೇಶದ ಪ್ರಕಾರವಾಗಿದೆ. ಎನ್ ಅರ್ ಸಿ ಗೆ ಸಮ್ಮತಿಸಿದ್ದು ರಾಜೀವ್ ಗಾಂಧಿ, ಬಿಜೆಪಿಯಲ್ಲ. ಕೋರ್ಟು ಆದೇಶದಂತೆ ಅದು ಅಲ್ಲಿ ನಡೆದಿದೆ. ದೇಶಾದ್ಯಂತ ಎನ್‍ಆರ್ ಸಿ ಜಾರಿ ಆವಶ್ಯಕತೆ ಬಂದರೆ ಕೇಂದ್ರ ಸರಕಾರದ ಅದರ ಕುರಿತು ಆಲೋಚಿಸಲಿದೆ. ಇದೇ ವೇಳೆ, ಪೌರತ್ವ ತಿದ್ದುಪಡಿ ಮಸೂದೆಯನ್ನು ಪಾರ್ಲಿಮೆಂಟು ಅಂಗೀಕರಿಸಿದೆ. ಇದು ಪಶ್ಚಿಮ ಬಂಗಾಳದಲ್ಲಿಯೂ ಜಾರಿಯಾಗಲಿದೆ ಎಂದು ಘೋಷ್ ಹೇಳಿದರು. ಪೌರತ್ವ ಪಟ್ಟಿಗೆ ಎನ್ ಆರ್ ಸಿಯನ್ನು ಜೋಡಿಸುವುದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಯತ್ನವೆಂದು ರಾಜಕೀಯ ವಿಶ್ಲೇಷಕರು ಬಿಜೆಪಿಯ ವಿರುದ್ಧ ಆರೋಪಿಸಿದ್ದಾರೆ.