ಪೌರತ್ವ ತಿದ್ದುಪಡಿ ಕಾಯ್ದೆ ಹಿಂಸಾಚಾರ; ಯೋಗಿ ಸರಕಾರವನ್ನು ಕಟುವಾಗಿ ಟೀಕಿಸಿದ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸಂದೀಪ್ ಪಾಂಡೆ

0
944

ಲಕ್ನೋ: ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆಯವರು ಯೋಗಿ ಸರಕಾರವನ್ನು ಕಟುವಾಗಿ ಟೀಕಿಸಿದ್ದು, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೊರಡುವವರ ವಿರುದ್ಧ ಉತ್ತರ ಪ್ರದೇಶ ಸರಕಾರ ಪ್ರತೀಕಾರ ತೀರಿಸುತ್ತಿದೆ ಎಂದು ಪತ್ರದ ಮೂಲಕ ಹೇಳಿದ್ದಾರೆ.

ಮಾತ್ರವಲ್ಲ, ರಾಜ್ಯ ಸರಕಾರ ಹೆಚ್ಚಿನ ಪ್ರಬುದ್ಧತೆ ಮತ್ತು ಸಂಯಮದಿಂದ ವರ್ತಿಸಬೇಕೆಂದು ಮನವಿ ಮಾಡಿದ ಅವರು, ಡಿಸೆಂಬರ್ 21 ರಂದು ನಿಮ್ಮನ್ನು ಭೇಟಿಯಾಗಲು ಕೇಳಿಕೊಂಡೆ. ಆದರೆ, ನಿಮ್ಮ ಕಡೆಯಿಂದ ನನಗೆ ಯಾವುದೇ ಉತ್ತರ ಸಿಗಲಿಲ್ಲ. ಲಕ್ನೋ ಮತ್ತು ಉತ್ತರಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರದರ್ಶನಗಳಲ್ಲಿ ಸರ್ಕಾರ ಮತ್ತು ಆಡಳಿತದ ವರ್ತನೆ ಕುರಿತು ಪ್ರತಿಕ್ರಿಯಿಸಲು ನಾನು ಈ ಮುಕ್ತ ಪತ್ರವನ್ನು ಬರೆಯುತ್ತಿದ್ದೇನೆ ಎಂದು ಪಾಂಡೆ ಹೇಳಿದ್ದಾರೆ.

ಲಕ್ನೋದಲ್ಲಿ ನಡೆದ ಪ್ರತಿಭಟನೆಯಲ್ಲಿ ದಾಖಲಾದ ಹಿಂಸಾಚಾರದ ಆರೋಪಿಗಳಲ್ಲಿ ಹೆಚ್ಚಿನವರು ಮುಸ್ಲಿಮರು ಎಂದ ಅವರು ಹೀಗೆ ಮುಸ್ಲಿಮರ ವಿರುದ್ಧ ತಾರತಮ್ಯವಿದ್ದರೆ, ಅವರು ಸರ್ಕಾರ ಮತ್ತು ಆಡಳಿತದ ನಂಬಿಕೆ ಇಟ್ಟುಕೊಳ್ಳುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ. ಲಕ್ನೌ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಬಗ್ಗೆ ಉಲ್ಲೇಖಿಸಿದ ಪಾಂಡೆ, ನಿಜವಾಗಿ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮೇತರರು ಭಾಗವಹಿಸಿದ್ದರು. ಆದರೆ ಮುಸ್ಲಿಮರನ್ನು ಹೆಚ್ಚಿನ ಆರೋಪಿಗಳನ್ನಾಗಿ ಮಾಡಲಾಗಿದ್ದು, ಉತ್ತರ ಪ್ರದೇಶದಲ್ಲಿ 16 ಮುಸ್ಲಿಮರು ಗೋಲಿಬಾರ್ ನಲ್ಲಿ ಮೃತಪಟ್ಟಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು.

ದೇಶದ ಇತರ ರಾಜ್ಯಗಳಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಿದ್ದು, ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರ ಏಕೆ ಹಿಂಸಾಚಾರ ನಡೆಯುತ್ತಿದೆ ಎಂದು ಪ್ರಶ್ನಿಸಬೇಕಾಗಿದೆ. ಸಂವಿಧಾನದ ಮೇಲೆ ನಂಬಿಕೆ ಇರುವ ಸಾಮಾಜಿಕ ಕಾರ್ಯಕರ್ತರನ್ನು ನೀವು ಜೈಲಿಗೆ ಕಳುಹಿಸಿದರೆ ಮತ್ತು ನಿಮ್ಮ ಪೊಲೀಸರಿಗೆ ಶಾಂತಿಯನ್ನು ಕಾಪಾಡಲು ಸಾಧ್ಯವಾಗದ ಕಾರಣ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟಿಸುವ ಪ್ರಕ್ರಿಯೆಯು ಕೊನೆಗೊಳ್ಳುತ್ತದೆ. ಇದರಿಂದ ಸಾಮಾನ್ಯ ಜನರು ದಾರಿ ತಪ್ಪುತ್ತಾರೆ ಎಂದು ಯೋಗಿ ಸರ್ಕಾರಕ್ಕೆ ತಾಕೀತು ಮಾಡಿದರು.