ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ.28: ಪೌರತ್ವ ತಿದ್ದುಪಡಿ ಕಾನೂನಿನ ನೆಪದಲ್ಲಿ ಕೋಮು ಬಣ್ಣ ಹಚ್ಚುವುದರ ವಿರುದ್ಧ ದೇಶ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವಾಗಲೇ ಅಸ್ಸಾಮ್ ನಲ್ಲಿ 426 ಕುಟುಂಬಗಳನ್ನು ಬಲವಂತದಿಂದ ಒಕ್ಕಲೆಬ್ಬಿಸಲಾಗಿದೆ. ಮನೆ ಮತ್ತು ವಾಸಸ್ಥಳವನ್ನು ಕೆಡವಲಾಗಿದೆ. ಅಸ್ಸಾಮ್ನ ಬಿಶ್ವನಾಥ್ ಜಿಲ್ಲೆಯ ಜೊಚ್ಟಿಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಪದ್ಮ ಹಝಾರಿಕ ನೇತೃತ್ವದಲ್ಲಿ ಡಿಸೆಂಬರ್ 22ಕ್ಕೆ ಜಿಲ್ಲಾಡಳಿತದ ಮೇಲ್ನೋಟದಲ್ಲಿ ಬಲಪ್ರಯೋಗಿಸಿ ಒಕ್ಕಲೆಬ್ಬಿಸಲಾಗಿದೆ. ಅವರ ಮನೆಗಳನ್ನು ಬುಲ್ಡೋಝರ್ ನಿಂದ ಕೆಡವಲಾಗಿದೆ.
ಅಸ್ಸಾಂ ನಿವಾಸಿಗಳೆಂದು ಪೌರತ್ವ ದಾಖಲೆಗಳು ಇರುವ ಮತ್ತು ಎನ್ಆರ್ ಸಿಯಲ್ಲಿ ಹೆಸರು ಇರುವವರು ಮತ್ತು ಪ್ರಳಯದಲ್ಲಿ ಮನೆ ಕಳಕೊಂಡು ಎರಡು ಕ್ಯಾ೦ಪುಗಳಲ್ಲಿ ವಾಸವಿದ್ದವರು ಇವರಾಗಿದ್ದಾರೆ. ಇವರಿಗೆ ಇನ್ನೊಂದು ಕ್ಷೇತ್ರದಲ್ಲಿ ಮತದಾನದ ಹಕ್ಕು ಇದೆ ಎಂಬ ಕಾರಣ ನೀಡಿ ಶಾಸಕನ ನೇತೃತ್ವದಲ್ಲಿ ಜಿಲ್ಲಾಡಳಿತವು ಕುಟುಂಬವನ್ನು ಒಕ್ಕಲೆಬ್ಬಿಸಿದೆ. ಎರಡು ಶಿಬಿರಗಳಲ್ಲಿ ಮುಸ್ಲಿಮರು ಮಾತ್ರ ವಾಸಿಸುತ್ತಿದ್ದು ಅದನ್ನು ಕೆಡವಲಾಗಿದೆ. ಉಳಿದವರನ್ನು ಅಲ್ಲಿಯೇ ವಾಸಿಸಲು ಬಿಡಲಾಗಿದೆ. ತೀವ್ರ ಚಳಿಯಲ್ಲಿ ಉಳಿದುಕೊಳ್ಳಲು ಸ್ಥಳವಿಲ್ಲದ ಇವರನ್ನು ಅಧಿಕಾರಿಳಾಗಲಿ, ಮಾಧ್ಯಮಗಳಾಗಲಿ ಗುರುತಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಈ ಘಟನೆಯನ್ನು ಮಾಧ್ಯಮಕ್ಕೆ ತಿಳಿಸಿದಾರೆ.
ಚಳಿಯಿಂದ ರಕ್ಷೆ ಪಡೆಯಲು ಇವರಲ್ಲಿ ಸೂರಿಲ್ಲ. ಸಾಕಷ್ಟು ಬಟ್ಟೆಯಿಲ್ಲ. ಕಂಬಳಿ ಇಲ್ಲ. ಪೌರತ್ವ ಪ್ರತಿಭಟನೆಯನ್ನು ಎದುರಿಸಲು, ಕಳೆದ ಹತ್ತು ದಿವಸಗಳಿಂದ ಇಂಟರ್ ನೆಟ್ ಸ್ಥಗಿತಗೊಳಿಸಿರುವುದರಿಂದ ಈ ವಿವರಗಳು ಹೊರಗೆ ಬಯಲಾಗಿಲ್ಲ. ನಾಲ್ಕುವರೆ ಕಿಲೊಮೀಟರ್ ದೂರದಲ್ಲಿ ತಾತ್ಕಾಲಿಕ ಶಿಬಿರದಲ್ಲಿ 426 ಕುಟುಂಬಗಳಿಗೆ ಪುನರ್ವಸತಿ ಮಾಡಿಕೊಡುವುದು ತುರ್ತಾಗಿ ನಡೆಯಬೇಕಾಗಿದೆ ಎಂದು ಮುಹಮ್ಮದ್ ಅಹ್ಮದ್ ಹೆಳಿದರು. ಕಾನೂನು ಸಹಾಯ, ಪುನರ್ವಸತಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.












