ಸನ್ಮಾರ್ಗ ವಾರ್ತೆ-
ಲಕ್ನೊ, ಜ. 9: ಬಿಜೆಪಿಯು ಪ್ರತೀಕಾರದ ಭಾವನೆಯಿಂದ ಕೆಲಸ ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರತೀಕಾರ ಭಾವನೆಯಿಂದಾಗಿ, ಅನ್ಯಾಯ, ಅನಾಚಾರ ಮತ್ತು ಭ್ರಷ್ಟಾಚಾರ ದಿನದಿಂನಕ್ಕೆ ಹೆಚ್ಚುತ್ತಿದೆ. ಕಾನೂನು ವ್ಯವಸ್ಥೆ ಕೆಟ್ಟಿದೆ. ಸಾಲಗಾರ ರೈತ, ಶಿಕ್ಷಣಕ್ಷೇತ್ರ, ನಿರೋದ್ಯೋಗಿ ಯುವಕರು ಮತ್ತು ಗೂಂಡಾಗಳಿಂದ ಹೆಣ್ಣುಮಕ್ಕಳು ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಉತ್ತರ ಪ್ರದೇಶ ಬಿಜೆಪಿಯ ಆಳ್ವಿಕೆಯಿಂದಾಗಿ ಹತ್ಯಾ ಪ್ರದೇಶವಾಗಿದೆ. ಇದನ್ನು ಪ್ರಶ್ನಿಸಿ ದೇಶ ಮಾತ್ರವಲ್ಲ ವಿದೇಶದಲ್ಲಿಯೂ ಬೆರಳೆತ್ತಲಾಗಿದೆ. ಬಾಬಂಕಿಯಲ್ಲಿ ಎಲ್ಎಲ್ಬಿ ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾಗಿ ಪೊಲೀಸರ ನಿಷ್ಕ್ರಿಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಳು. ಅವಳ ಕಣ್ಣಿಗೂ ಹಲ್ಲೆ ಮಾಡಲಾಗಿತ್ತು. ನೊಯಿಡದಲ್ಲಿ ಕಂಪೆನಿಯೊಂದರ ರೀಜನಲ್ ಮ್ಯಾನೆಜರ್ ನನ್ನ ದೋಚಿ ಹತ್ಯೆ ಮಾಡಲಾಗಿದೆ. ಲಕ್ನೊದಲ್ಲಿ ಓರ್ವ ವಕೀಲರ ಹತ್ಯೆ ಆಗಿದೆ ಎಂದು ಅವರು ಹೇಳಿದರು.
ಲಕ್ನೊದಲ್ಲಿ ಮಾತ್ರವಲ್ಲ ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಅಪರಾಧಿ ಘಟನೆಗಳು ನಡೆಯುತ್ತಿದ್ದು ಕೊನೆಗೊಂಡಿಲ್ಲ. ನಕಲಿ ಎನ್ಕೌಂಟರ್ ನಿಂದಾಗಿ ಪೊಲೀಸರಿಗೆ ಕೆಟ್ಟ ಹೆಸರು ಬಂದಿದೆ. ರಾಷ್ಟ್ರೀಯ ಮಾನವಹಕ್ಕು ಆಯೋಗ ಕೂಡ ಇದನ್ನೇ ಹೇಳಿದೆ. ರಾಜ್ಯಪಾಲರು ಇದನ್ನು ನೋಡಿ ಸುಮ್ಮನೆ ಇದ್ದಾರೆ. ಅವರಿಗೆ ಬಿಜೆಪಿ ಸರಕಾರ ಎರಡೂವರೆ ವರ್ಷ ಉತ್ತಮ ಕೆಲಸ ಮಾಡಿದೆ ಎಂದು ಅನಿಸುತ್ತಿದೆ. ಬಿಜೆಪಿಯ ಆಡಳಿತದಲ್ಲಿ ಅವರಿಗೆ ಸುಖಶಾಂತಿ ಕಂಡು ಬರುತ್ತಿದೆ. ಉನ್ನತ ಪೊಲೀಸಧಿಕಾರಿಗಳ ವಿರುದ್ಧ ಲೈಂಗಿಕ ಶೋಷಣೆಯ ಆರೋಪ ಕೇಳಿ ಬಂದಿದೆ ಎಂದು ಅಖಿಲೇಶ್ ಯಾದವ್ ಟೀಕಿಸಿದರು.












