ಡಿ. 19ರಂದು ಮಂಗಳೂರಿನಲ್ಲಿ ನಡೆದದ್ದೇನು? ಪೊಲೀಸರು ಬಿಡುಗಡೆ ಮಾಡಿದ ವೀಡಿಯೊದಲ್ಲಿ ಅಡಗಿಸಿಟ್ಟಿರುವುದೇನು? ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ 35 ವೀಡಿಯೋದಲ್ಲಿದೆ ಬಹಿರಂಗವಾಗದ ಸತ್ಯ

0
4011

ಸನ್ಮಾರ್ಗ ವಾರ್ತೆ

ಬೆಂಗಳೂರು: ಜ. 10- ಡಿ. 19ರಂದು ಮಂಗಳೂರಿನಲ್ಲಿ ನಡೆದ ಘಟನೆಯ ಕುರಿತಂತೆ ಪೊಲೀಸರ ಪಾತ್ರದ ಬಗ್ಗೆ 35 ಸಿಸಿ ಟಿ ವೀಡಿಯೊ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯವನ್ನು ಮತ್ತೊಂದು ಕಾಶ್ಮೀರ ಮಾಡಲು ಬಿಜೆಪಿ ಸರಕಾರ ಹೊರಟಿದೆ ಎಂದು ಆರೋಪಿಸಿದರು. ಜೊತೆಗೆ ಪ್ರತಿಭಟನಾಕಾರರು ಬಂದರು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಟಿವಿ ವಿಡಿಯೋಗಳನ್ನು ಸರಕಾರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಪೀಪಲ್ಸ್ ಕೋರ್ಟ್ ಎಂಬ ಚರ್ಚೆ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಹಮ್ಮಿಕೊಂಡ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರಿಗೆ ಮಂಗಳೂರು ಪೊಲೀಸರು ನೀಡಿದ ಅಡಚಣೆ ಮತ್ತು ಅವಕಾಶ ನಿರಾಕರಣೆಯನ್ನು ಅವರು ಈ ಸಂದರ್ಭದಲ್ಲಿ ಪ್ರಬಲವಾಗಿ ಖಂಡಿಸಿದರು. ಉಡುಪಿ ಜಿಲ್ಲಾಧಿಕಾರಿಯ ಮ್ಯಾಜಿಸ್ಟ್ರೇಟ್ ತನಿಖೆಯಿಂದ ಎಂಥ ವರದಿ ಬರಲು ಸಾಧ್ಯ ಎಂದವರು ಅನುಮಾನವನ್ನು ವ್ಯಕ್ತಪಡಿಸಿದರು.

ಗಲಭೆಕೋರರು ಕೇರಳದಿಂದ ಬಂದವರು ಎಂದು ಗೃಹ ಸಚಿವರು ಹೇಳಿದರೆ ಪೊಲೀಸರು ನಿತ್ಯವೂ ಒಂದೊಂದು ಸುಳ್ಳು ಹೇಳುತ್ತಿದ್ದಾರೆ. ಡಿಸೆಂಬರ್ 19ರಂದು ಮಂಗಳೂರು ಘಟನೆ ನಡೆದಿದೆ. ಡಿಸೆಂಬರ್ 24ರಂದು ಪ್ರತಿಭಟನಾಕಾರರು ಕಲ್ಲುಗಳನ್ನು ತಂದ ಕಥೆಯನ್ನು ಪೊಲೀಸರು ಕಟ್ಟಿದರು. ಆದರೆ ಅಲ್ಲಿ ಆಗಿರುವುದೇ ಬೇರೆ. ಮೂರು ಬಾರಿ ಕಟ್ಟಡ ತ್ಯಾಜ್ಯ ಸಾಗಿಸಿದ್ದ ಸರಕು ಸಾಗಣೆ ಟೆಂಪೋ ನಾಲ್ಕನೇ ಬಾರಿ ಬರುವಾಗ ಗಲಭೆ ಉಂಟಾದ ಕಾರಣ ಚಾಲಕ ತನ್ನ ಆಟೋವನ್ನು ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದ. ಆದರೆ ಅದನ್ನೇ ಕತೆಕಟ್ಟಿ ಕಲ್ಲು ತಂದು ಇಡಲಾಗಿದೆ ಎಂದು ಬಿಂಬಿಸುವ ಪ್ರಯತ್ನ ಪೊಲೀಸರು ಬಿಡುಗಡೆ ಮಾಡಿದ ವಿಡಿಯೋದಿಂದ ಆಗಿದೆ ಎಂದವರು ಆರೋಪಿಸಿದರು.

ನಾನು ಈ ವೀಡಿಯೋ ಸಾಕ್ಷ್ಯವನ್ನು ಸದನದಲ್ಲಿ ಬಹಿರಂಗಪಡಿಸಲು ಸಂಗ್ರಹಿಸಿದ್ದೆ. ಆದರೆ ಯಾವಾಗ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರಿಗೆ ಸಂತ್ರಸ್ತರೊಂದಿಗೆ ಸಂವಾದ ನಡೆಸಲೂ ಅವಕಾಶ ನಿರಾಕರಿಸಲಾಯಿತೋ ಸಿಡಿಯನ್ನು ಬಹಿರಂಗಪಡಿಸಲು ತೀರ್ಮಾನಿಸಿದೆ. ಇನ್ನು ಜನರು ತೀರ್ಮಾನಿಸಲಿ ಎಂದು ಅವರು ಹೇಳಿದರು. ಅದೇ ವೇಳೆ ಗೋಪಾಲಗೌಡರು ಮಂಗಳೂರಿನಲ್ಲಿ ಮಾತಾಡದಂತೆ ತಡೆಯಲು ಯಾರು ಸೂಚನೆ ಕೊಟ್ಟದ್ದು ಮುಖ್ಯಮಂತ್ರಿಯೇ ಎಂದು ಅವರು ಪ್ರಶ್ನಿಸಿದರು. ಈ ಗಲಭೆಯ ಕುರಿತಂತೆ ಸದನ ಸಮಿತಿ ರಚಿಸಿ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

ಈ ಘಟನೆಯನ್ನು ನಾನು ಸುಲಭದಲ್ಲಿ ಬಿಡಲಾರೆ. ವಿಧಾನಸಭೆಯಲ್ಲಿ ಪ್ರಸ್ತಾಪಿಸುವೆ ಎಂದವರು ಹೇಳಿದರು. ಗಲಭೆಯ ಕುರಿತಂತೆ ಅವರು 35 ವಿಡಿಯೋಗಳನ್ನು ಬಿಡುಗಡೆಗೊಳಿಸಿದ್ದು ಘಟನೆಯಲ್ಲಿ ಪೊಲೀಸರ ಪಾತ್ರವನ್ನು ಮತ್ತು ಪೊಲೀಸರ ವಿವಿಧ ಪ್ರಚೋದನಾತ್ಮಕ ಕ್ರಮಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ವೀಡಿಯೊ ಕೃಪೆ: ವಾರ್ತಾ ಭಾರತಿ