ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 18: ದಿಲ್ಲಿ ಪೊಲೀಸ್ ಕಮಿಶನರ್ ಗೆ ಗೃಹ ಸಚಿವಾಲಯ ವಿಶೇಷ ಅಧಿಕಾರ ನೀಡಿ ಪ್ರಕಟಣೆ ಹೊರಡಿಸಿದೆ. ಜನರನ್ನು ನಿರೀಕ್ಷಣಾ ಕಸ್ಟಡಿಯಲ್ಲಿ ಇರಿಸಲು ರಾಷ್ಟ್ರೀಯ ಸುರಕ್ಷಾ ಕಾನೂನು ಪ್ರಕಾರ ಅಧಿಕಾರ ನೀಡಲಾಗಿದ್ದು ರವಿವಾರದಿಂದ ಎಪ್ರಿಲ್ ಹದಿನೆಂಟರವರೆಗೆ ಮೂರು ತಿಂಗಳು ಜೈಲಿನಲ್ಲಿರಿಸುವ ವಿಶೇಷ ಅಧಿಕಾರವನ್ನು ಪೊಲೀಸ್ ಕಮಿಶನರ್ ಗೆ ನೀಡಲಾಗಿದೆ. ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಕ್ರಮ ಜರಗಿಸಿದೆ. ಗಣರಾಜ್ಯೋತ್ಸವ ದಿನಾಚರಣೆ, ಪಾರ್ಲಿಮೆಂಟು ಅಧಿವೇಶನ, ದಿಲ್ಲಿ ವಿಧಾನಸಭೆಯ ಚುನಾವಣೆ ಇರುವುದರಿಂದ ವಿಶೇಷ ಅಧಿಕಾರ ನೀಡಲಾಗಿದೆ ಎಂದು ತಿಳಿಸಲಾಗಿದೆ. ಲೆಪ್ಟಿನೆಂಟ್ ಗವರ್ನರ್ ಗೆ ಇರುವ ಅಧಿಕಾರವನ್ನು ದಿಲ್ಲಿ ಪೊಲೀಸ್ ಕಮಿಶನರ್ ಗೆ ನೀಡಲಾಗಿದೆ. ದೇಶ ಸುರಕ್ಷೆಯನ್ನು ಮುಂದಿಟ್ಟು ಜನರನ್ನು ಕಸ್ಟಡಿಯಲ್ಲಿರಿಸಲು, ನಿರೀಕ್ಷಣಾ ಕಸ್ಟಡಿಯಲ್ಲಿರಿಸಲು ನೇರ ಆದೇಶ ಹೊರಡಿಸಲು ಕಮಿಶನರ್ ಗೆ ಸಾಧ್ಯವಾಗಲಿದೆ. ರಾಷ್ಟ್ರ ಸುರಕ್ಷಾ ಕಾನೂನಿನ ಮೂರನೇ ಕಲಂ ಪ್ರಕಾರ ಪ್ರಕಟಣೆ ಹೊರಡಿಸಲಾಗಿದೆ. ಜೈಲಿನಲ್ಲಿರುವ ವ್ಯಕ್ತಿಗೆ ವಕೀಲರ ಸೇವೆ ಲಭಿಸುವುದಿಲ್ಲ.
ವಿಶೇಷ ಅಧಿಕಾರ ನೀಡುವ ಆದೇಶದಲ್ಲಿ ವಿಶೇಷತೆ ಇಲ್ಲ ಎಂದು ದಿಲ್ಲಿ ಪೊಲೀಸ್ ತಿಳಿಸಿದೆ. ಮೂರು ತಿಂಗಳು ಕಳೆದಾದ ನಂತರ ಇಂತಹ ಆದೇಶ ಪುನಃ ಹೊರಡಿಸಬೇಕಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.












