ನಿರ್ಭಯಳ ತಾಯಿಗೆ ಸೋನಿಯಾ ಗಾಂಧಿ ಮಾದರಿ ಆಗಬೇಕು- ಇಂದಿರಾ ಜೈಸಿಂಗ್

0
640

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ದಿಲ್ಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲ್ಲಲ್ಪಟ್ಟಿರುವ ನಿರ್ಭಯಳ ತಾಯಿ ಸೋನಿಯಾ ಗಾಂಧಿಯವರ ಮಾದರಿಯನ್ನು ಅನುಸರಿಸಬೇಕೆಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು. ಆಶಾದೇವಿಯವರ ನೋವು ಅರ್ಥವಾಗುತ್ತದೆ. ಅವರು ಸೋನಿಯಾ ಗಾಂಧಿಯವರ ಮಾದರಿಯಾಗಬೇಕೆಂದು ಆಗ್ರಹಿಸುತ್ತೇನೆ. ನಿರ್ಭಯ ಕೇಸಿನ ಆರೋಪಿಗಳಿಗೆ ಗಲ್ಲು ಶಿಕ್ಷೆ ತಡವಾಗುವುದನ್ನು ವಿರೋಧಿಸಿ ನಿರ್ಭಯಾಳ ತಾಯಿ ಆಶಾದೇವಿ ರಂಗ ಪ್ರವೇಶಿಸಿರುವುದನ್ನು ಉದ್ಧರಿಸಿ ಇಂದಿರಾ ಜೈಸಿಂಗ್ ಹೀಗೆ ಹೇಳಿದರು.

ರಾಜೀವ್ ಗಾಂಧಿ ಕೊಲೆ ಆರೋಪಿಯಾದ ನಳಿನಿಯವರನ್ನು ಸೋನಿಯಾ ಗಾಂಧಿ ಕ್ಷಮಿಸಿದರು. ಅವರಿಗೆ ಗಲ್ಲು ಕೊಡಬೇಕೆಂದು ಸೋನಿಯಾ ಬಯಸಲಿಲ್ಲ. ನಾವು ನಿಮ್ಮ ಜೊತೆ ಇದ್ದೇವೆ. ಆದರೆ ಗಲ್ಲು ಶಿಕ್ಷೆಯನ್ನು ವಿರೋಧಿಸುತ್ತೇವೆಂದು ಇಂದಿರಾ ಜೈಸಿಂಗ್ ಟ್ವೀಟ್ ಮಾಡಿದ್ದಾರೆ.

ಇದೇವೇಳೆ, ತನಗೆ ಇಂತಹ ಸಲಹೆ ಕೊಡಲು ಜೈಸಿಂಗ್ ಯಾರು ಎಂದು ಆಶಾ ದೇವಿ ಪ್ರಶ್ನಿಸಿದರು. ಇಡೀ ದೇಶವೇ ನಿರ್ಭಯಾ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಬಯಸುತ್ತಿದೆ ಎಂದು ಅವರು ಹೇಳಿದರು. ಫೆಬ್ರುವರಿ ಒಂದಕ್ಕೆ ನಿರ್ಭಯ ಪ್ರಕರಣದ ಆರೋಪಿಗಳಿಗೆ ಗಲ್ಲು ವಿಧಿಸಲು ಕೋರ್ಟ್ ದಿನಾಂಕ ಸೂಚಿಸಿ ಆದೇಶ ಹೊರಡಿಸಿದೆ. ಪ್ರಕರಣದ ಆರೋಪಿಗಳಾದ ವಿನಯ್, ಅಕ್ಷಯ್, ಪವನ್, ಮುಖೇಶ್‍ರಿಗೆ ಗಲ್ಲು ಶಿಕ್ಷೆ ನೀಡಲಾಗುವುದು. ಜನವರಿ 22ಕ್ಕೆ ಗಲ್ಲು ಶಿಕ್ಷೆ ಜಾರಿಗೊಳಿಸಲು ನಿರ್ಧರಿಸಿದ್ದರೂ ಆರೋಪಿಗಳು ತಿದ್ದುಪಡಿ ಅರ್ಜಿ ಸಲ್ಲಿಸಿದ್ದರಿಂದ ಅದು ವಿಳಂಬವಾಗಿತ್ತು.