
ಸನ್ಮಾರ್ಗ ವಾರ್ತೆ
ನವದೆಹಲಿ; ಜ. 22- ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಮತ್ತು ಬಿಜೆಪಿ ಜೊತೆಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿರುವರೆಂದು ನಂಬಲಾಗಿರುವ ನಜೀಬ್ ಜಂಗ್ ಅವರು ಈ ಕಾನೂನು ಪುನರ್ ಪರಿಶೀಲನೆಗೆ ಒಳಗಾಗಬೇಕೆಂದು ಹೇಳಿ ಅಚ್ಚರಿ ಹುಟ್ಟಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಗೆ ತಿದ್ದುಪಡಿ ಬೇಕು ಎಂದು ನಾನು ಭಾವಿಸುತ್ತೇನೆ. ಈ ಕಾಯ್ದೆಯಲ್ಲಿ ಮುಸ್ಲಿಮರನ್ನೂ ಸೇರಿಸಿಕೊಳ್ಳಬೇಕು ಅಥವಾ ಇತರ ಧರ್ಮೀಯರನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಪ್ರಧಾನಿ ನರೇಂದ್ರ ಮೋದಿ ಈ ಪ್ರತಿಭಟನಾಕಾರರನ್ನು ಕರೆದು ಮಾತುಕತೆ ನಡೆಸಿದರೆ, ಈ ವಿಷಯವನ್ನು ಬಗೆಹರಿಸಬಹುದು ಎಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಂಗ್ ಹೇಳಿದರು.
ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆಯುತ್ತಿರುವಾಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರವು ಚಳವಳಿಗಾರರನ್ನು ಭೇಟಿ ಮಾಡಿತ್ತು ಎಂದು ಹೇಳಿದ ಜಾಮಿಯಾದ ಮಾಜಿ ಉಪಕುಲಪತಿಯಾಗಿದ್ದ ಜಂಗ್, ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಭೇಟಿಯಾಗದಿರುವ ಬಗ್ಗೆ ಕೇಂದ್ರವನ್ನು ಪ್ರಶ್ನಿಸಿದರು .
ಈ ಹಿಂದೆ ಭ್ರಷ್ಟಾಚಾರದ ವಿರುದ್ಧ ಸಾಮಾನ್ಯ ಜನರ ಆಂದೋಲನ ನಡೆಯುತ್ತಿರುವಾಗ, ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಹಚರರನ್ನು ಭೇಟಿ ಮಾಡಿತ್ತು . ಇವತ್ತು ಪ್ರತಿ ಮೂಲೆ ಮತ್ತು ಮೂಲೆಯಲ್ಲೂ ಒಂದು ಕ್ರಾಂತಿ ನಡೆಯುತ್ತಿದೆ. ನೀವು (ಸರ್ಕಾರ) ಈ ವಿದ್ಯಾರ್ಥಿಗಳೊಂದಿಗೆ ಚರ್ಚಿಸಬೇಕಾಗುತ್ತದೆ. ಅವರು ದೇಶವನ್ನು ನಡೆಸುತ್ತಾರೆ ಎಂದು ಜಂಗ್ ಹೇಳಿರುವುದಾಗಿ ಪಿಟಿಐ ಉಲ್ಲೇಖಿಸಿದೆ. ಅದೇವೇಳೆ, ಜೆಎನ್ಯು ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿನ ಹಿಂಸಾಚಾರದ ಜೊತೆಗೆ ವಿಶ್ವವಿದ್ಯಾಲಯದಲ್ಲಿ ಪೊಲೀಸ್ ಕ್ರಮವನ್ನು ಜಂಗ್ ಖಂಡಿಸಿದರು .
ಇತ್ತೀಚೆಗೆ ಪ್ರಧಾನಿಗೆ ಮುಕ್ತ ಪತ್ರ ಬರೆದ 106 ವ್ಯಕ್ತಿಗಳಲ್ಲಿ ಜಂಗ್ ಒಬ್ಬರಾಗಿದ್ದಾರೆ. NPR ಮತ್ತು NRC ಅನಗತ್ಯ ಮತ್ತು ವ್ಯರ್ಥ ಕ್ರಮ, ಇದು ಸಾರ್ವಜನಿಕರಿಗೆ ತೊಂದರೆಗಳನ್ನುಂಟು ಮಾಡುತ್ತದೆ. ಮುಸ್ಲಿಮರನ್ನು ಪ್ರಜ್ಞಾಪೂರ್ವಕವಾಗಿ ತನ್ನ ವ್ಯಾಪ್ತಿಯಿಂದ ಹೊರಗಿಡುವ CAA ಯು, ಭಾರತದ ಜನಸಂಖ್ಯೆಯ ಬಹುದೊಡ್ಡ ಭಾಗದ ಆತಂಕಗಳಿಗೆ ಕಾರಣವಾಗುತ್ತದೆ ಎಂದು ಅವರು ಪತ್ರದಲ್ಲಿ ಹೇಳಿದ್ದರು.











