ಸನ್ಮಾರ್ಗ ವಾರ್ತೆ
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದುದಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಮುಹಮ್ಮದ್ ಸಲೀಮ್ ಎಂಜಿನಿಯರ್ ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ.
ಸಿಎಎಗೆ ತಡೆಯಾಜ್ಞೆ ನೀಡುವ ಮೂಲಕ ಸುಪ್ರೀಂ ಕೋರ್ಟ್ ಭಾರತೀಯರಿಗೆಜನರಿಗೆ ಸಹಾಯ ಮಾಡುವುದೆಂದು ನಾವು ನಿರೀಕ್ಷಿಸಿದ್ದೆವು. ಏಕೆಂದರೆ ಸಂಸತ್ತು ಮಾಡಿದ ತಪ್ಪನ್ನು ಸರಿಪಡಿಸುವುದು ಸುಪ್ರೀಂ ಕೋರ್ಟ್ನ ಜವಾಬ್ದಾರಿಯಾಗಿದೆ. ಸಿಎಎ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದ್ದು ನಮ್ಮನ್ನು ನಿರಾಶೆಗೊಳಿಸಿದೆ. ಕೇಂದ್ರ ಸರಕಾರಕ್ಕೆ ಈಗಾಗಲೇ ಲಭಿಸಿರುವ ಸಮಯವೂ ಧಾರಾಳ ಸಾಕಾಗಿತ್ತು ಮತ್ತು ಕೋರ್ಟು ಇಂದು ತನ್ನ ಅಂತಿಮ ತೀರ್ಪನ್ನು ನೀಡಬೇಕಾಗಿತ್ತು. ಸಂಸತ್ತು ಸಿಎಎಯನ್ನು ಪಾಸು ಮಾಡಿದ ದಿನದಿಂದ ಇಷ್ಟು ದೀರ್ಘ ಅವಧಿಯೊಳಗೆ ಕೇಂದ್ರದಿಂದ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಬಹುದಿತ್ತು ಮತ್ತು ಇಂದು ಪೂರ್ಣ ಮತ್ತು ಅಂತಿಮ ತೀರ್ಮಾನವನ್ನು ಉನ್ನತ ನ್ಯಾಯಾಲಯವು ನೀಡಬೇಕಾಗಿತ್ತು . ಆದ್ದರಿಂದ ಇದೀಗ ನಾಲ್ಕು ವಾರಗಳ ಕಾಲಾವಕಾಶವನ್ನು ಕೇಂದ್ರಕ್ಕೆ ನೀಡಿರುವುದು ನಮಗೆ ಗಾಢ ನಿರಾಶೆಯನ್ನು ತಂದಿದೆ. ಈ ವಿಳಂಬವು ಭಾರತೀಯರಿಗೆ ನ್ಯಾಯವನ್ನು ವಿಳಂಬಗೊಳಿಸಿದೆ. ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ ಎಂದವರು ಹೇಳಿದ್ದಾರೆ.












