ಸನ್ಮಾರ್ಗ ವಾರ್ತೆ
ಅಲಿಗಡ, ಜ. 23: ಹಿಂದುತ್ವ ಸಿದ್ಧಾಂತಿ ಸಾವರ್ಕರ್ ರನ್ನು ಅವಮಾನಕಾರಿಯಾಗಿ ಟೀಕಿಸಿದ್ದಾರೆ ಎಂದು ಮ್ಯಾಗಸ್ಸೆಸೆ ಪ್ರಶಸ್ತಿ ವಿಜೇತ ಮಾನವಹಕ್ಕು ಕಾರ್ಯಕರ್ತ ಸಂದೀಪ್ ಪಾಂಡೆ ವಿರುದ್ದ ಪೊಲೀಸರು ಹಿಂದೂ ಮಹಾಸಭಾ ನೀಡಿದ ದೂರಿನಲ್ಲಿ ಕೇಸು ದಾಖಲಿಸಿದ್ದಾರೆ. ರವಿವಾರ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪೌರತ್ವ ತಿದ್ದುಪಡಿ ಕಾನೂನು ವಿರೋಧ ಹೋರಾಟವನ್ನು ಉದ್ದೇಶಿಸಿ ಮಾತಾಡುವಾಗ ಸಂದೀಪ್ ಇಂತಹ ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದರ ಅಧಾರದಲ್ಲಿ ಗಲಭೆಗೆ ಕಾರಣವಾಗುವ ರೀತಿಯಲ್ಲಿ ಪ್ರಚೋದನೆ ನಡೆಸಿರುವುದು ಮತ್ತು ಜನರನ್ನು ಅದಕ್ಕೆ ಪ್ರೇರೇಪಿಸಿದ್ದಕ್ಕಾಗಿ ಪೊಲೀಸರು ಕೇಸು ದಾಖಲಿಸಿಕೊಂಡರು. ಇದೇ ಜನರು ಬ್ರಿಟಿಷರ ಆಳ್ವಿಕೆಯಲ್ಲಿ ಹಿಂದೂ ಮುಸ್ಲಿಮರಲ್ಲಿ ಒಡಕು ಮೂಡಿಸಲು ಯತ್ನಿಸಿದರು. ಬಲಪಂಥೀಯ ಸಂಘಟನೆಗಳು ನಿಯೋಜಿಸಿದ ಮುಖವಾಡಧಾರಿಗಳು ಜೆಎನ್ಯುನಲ್ಲಿ, ಜಾಮಿಯಾ ಮಿಲ್ಲಿಯ ಮತ್ತು ಅಲಿಗಡದಲ್ಲಿ ದಾಂಧಲೆ ಮಾಡಿದರೆಂದು ಸಂದೀಪ್ ಪಾಂಡೆ ಹೇಳಿದ್ದರು.












