ಎನ್‌ಪಿಆರ್ ಜಾಹೀರಾತು: ಭಾರೀ ಮೊತ್ತದ ಠೇವಣಿಯನ್ನು ಹಿಂಪಡೆದು ಬ್ಯಾಂಕ್ ಅನ್ನು ದಿಗಿಲುಗೊಳಿಸಿದ ಗ್ರಾಹಕರು: ಎನ್‌ಪಿಆರ್ ನಿಂದ ಹಿಂದೆ ಸರಿದ ಬ್ಯಾಂಕ್

0
6036

ಸನ್ಮಾರ್ಗ ವಾರ್ತೆ

ತಮಿಳುನಾಡಿನಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಒಂದು ಶಾಖೆಯಲ್ಲಿ ಠೇವಣಿದಾರರು ಶನಿವಾರ ರಿಂದ ಸೋಮವಾರದವರೆಗೆ ಸುಮಾರು 4.5 ಕೋಟಿ ರೂಪಾಯಿಯನ್ನು ಹಿಂಪಡೆದಿದ್ದು, ಬ್ಯಾಂಕ್ ದಿಗಿಲಾಗಿದೆ. ಗ್ರಾಹಕರ ಗುರುತನ್ನು ಸಾಬೀತುಪಡಿಸುವುದಕ್ಕೆ (ಕೆವೈಸಿ) ಎನ್ ಪಿ ಆರ್ ನಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ನೀಡುವುದು ಅನಿವಾರ್ಯವೆಂಬಂತೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ್ದ ಜಾಹೀರಾತನ್ನು ಪರಿಗಣಿಸಿ ಜನರು ಭಾರೀ ಸಂಖ್ಯೆಯಲ್ಲಿ ತಮ್ಮ ಠೇವಣಿಯನ್ನು ಹಿಂತೆಗೆದು ಬ್ಯಾಂಕನ್ನು ದಿಗಿಲುಗೊಳಿಸಿದ್ದಾರೆ.

ತೂತುಕುಡಿ ಬಳಿಯ ಕಾಯಲ್ಪಟ್ಟಿನಂ ಗ್ರಾಮದ ಶಾಖೆಯೊಂದರಲ್ಲಿ ಈ ಘಟನೆ ನಡೆಯಿತು. ಜನವರಿ 11 ರಂದು ಪತ್ರಿಕೆಗಳಲ್ಲಿ ಬ್ಯಾಂಕ್ ಜಾಹೀರಾತನ್ನು ಪ್ರಕಟಿಸಿತ್ತು, ಗ್ರಾಹಕ ಪರಿಶೀಲನೆಗಾಗಿ (ಕೆವೈಸಿ) ಮಾನ್ಯ ದಾಖಲೆಗಳನ್ನು ಅದು ಜಾಹೀರಾತಿನಲ್ಲಿ ಪಟ್ಟಿ ಮಾಡಿದ್ದು – ಎನ್‌ಪಿಆರ್ ದಾಖಲೆಯನ್ನು ಅದು ಸೇರಿಸಿತ್ತು. ಗ್ರಾಹಕರು ಎನ್‌ಪಿಆರ್ ನಲ್ಲಿ ಉಲ್ಲೇಖಿತವಾಗಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿದೆಯೇ ಅಥವಾ ಅವುಗಳಲ್ಲಿ ಯಾವುದಾದರೊಂದು ಸಾಕೇ ಎಂಬ ಬಗ್ಗೆ ಸ್ಪಷ್ಟತೆಯನ್ನು ನೀಡಿರಲಿಲ್ಲ. ಇದಲ್ಲದೆ, ಜನವರಿ 31 ರ ಮೊದಲು ದಾಖಲೆಗಳನ್ನು ಸಲ್ಲಿಸದವರ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಅದು ಹೇಳಿತ್ತು.

ಇದು ಆತಂಕಕ್ಕೆ ಕಾರಣವಾಯಿತು. ಗ್ರಾಹಕರು ಶನಿವಾರ 1 ಕೋಟಿ ರೂ. ಮತ್ತು ಸೋಮವಾರ 1.85 ಕೋಟಿ ರೂಪಾಯಿಯನ್ನು ಹಿಂಪಡೆದರು. ಆಗ ಎಚ್ಚೆತ್ತ ಬ್ಯಾಂಕ್ ಎನ್‌ಪಿಆರ್ ಐಚ್ಛಿಕವಾಗಿದೆ ಮತ್ತು ಇತರ ಮಾನ್ಯ ದಾಖಲೆಗಳನ್ನು ಸಹ ಸಲ್ಲಿಸಬಹುದು ಎಂದು ಜನವರಿ 19 ರಂದು ಹೊಸ ಜಾಹೀರಾತನ್ನು ಬಿಡುಗಡೆ ಮಾಡಿತು.ಈ ಬ್ಯಾಂಕ್ ನ ಹೆಚ್ಚಿನ ಗ್ರಾಹಕರು ಮುಸ್ಲಿಮರಾಗಿದ್ದು, ಬಹುತೇಕರು ಠೇವಣಿಯನ್ನು ಹಿಂಪಡೆದಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.