ಸನ್ಮಾರ್ಗ ವಾರ್ತೆ
ಹೈದರಾಬಾದ್, ಜ. 27: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲು ಬಂದ ತನ್ನನ್ನು ಬಂಧಿಸಿ ದಿಲ್ಲಿ ಪೊಲೀಸರ ಕೈಗೊಪ್ಪಿಸಿದ ತೆಲಂಗಾಣ ಪೊಲೀಸರ ಕ್ರಮದ ವಿರುದ್ಧ ಭೀಮ್ ಆರ್ಮಿ ನಾಯಕ ಚಂದ್ರ ಶೇಖರ್ ಆಝಾದ್ ಗುಡುಗಿದ್ದಾರೆ. ತೆಲಂಗಾಣದಲ್ಲಿ ಸರ್ವಾಧಿಕಾರ ಉಚ್ಚ ಸ್ಥಾಯಿಯಲ್ಲಿದೆ. ಪ್ರತಿಭಟಿಸುವ ಜನರ ಹಕ್ಕನ್ನು ಕಬಳಿಸಲಾಗುತ್ತಿದೆ ಎಂದು ಆಝಾದ್ ಟ್ವೀಟ್ ಮಾಡಿದ್ದಾರೆ. ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಹೈದರಾಬಾದ್ನ ಕ್ರಿಸ್ಟಲ್ ಗಾರ್ಡನಲ್ಲಿ ಪ್ರತಿಭಟನೆ ರ್ಯಾಲಿಯಲ್ಲಿ ಭಾಗವಹಿಸಲು ಬಂದ ಆಝಾದ್ರನ್ನು ಹೊಟೇಲಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಸೋಮವಾರ ಬೆಳಗ್ಗೆ ಅವರನ್ನು ದಿಲ್ಲಿಗೆ ರವಾನಿಸಲಾಗಿತ್ತು.
ತೆಲಂಗಾಣದಲ್ಲಿ ಸ್ವೇಚ್ಛಾಧಿಪತ್ಯ ಮೇರುಸ್ಥಾಯಿಯಲ್ಲಿದೆ. ಪ್ರತಿಭಟಿಸುವ ಜನರ ಹಕ್ಕನ್ನು ಕಸಿಯಲಾಗುತ್ತಿದೆ. ಮೊದಲು ನಮ್ಮ ಜನರ ಮೇಲೆ ಲಾಠಿ ಬೀಸಲಾಯಿತು. ನಂತರ ನನ್ನನ್ನು ಬಂಧಿಸಲಾಯಿತು. ಈಗ ವಿಮಾನ ನಿಲ್ದಾಣಕ್ಕೆ ಕರೆತಂದು ದಿಲ್ಲಿಗೆ ಮರಳಿ ಕಳುಹಿಸಲಾಗುತ್ತಿದೆ. ಬಹುಜನ ಸಮಾಜ ಈ ಅಪಮಾನವನ್ನು ಎಂದೂ ಮರೆಯುವುದಿಲ್ಲ. ಶೀಘ್ರ ಮರಳಿ ಬರುತ್ತೇನೆ” ಎಂದು ಆಝಾದ್ ಟ್ವೀಟ್ ಮಾಡಿದ್ದಾರೆ.
ಕ್ರಿಸ್ಟಲ್ ಗಾರ್ಡನ್ ರ್ಯಾಲಿಗೆ ಪೊಲೀಸರು ಅನುಮತಿ ಕೊಟ್ಟಿರಲಿಲ್ಲ. ಆದರೆ ಅದನ್ನು ಮೀರಿ ಚಂದ್ರ ಶೇಖರ್ ಆಝಾದ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ ಎಂದು ಸೂಚನೆ ಸಿಕ್ಕಿತ್ತು. ನಂತರ ಪೊಲೀಸರು ಆಝಾದ್ ಇದ್ದ ಹೊಟೇಲ್ಗೆ ಬಂದು ಅವರನ್ನು ವಶಕ್ಕೆ ಪಡೆದು ದಿಲ್ಲಿಗೆ ಕಳುಹಿಸಿದ್ದಾರೆ. ಈ ಹಿಂದೆ ಅವರನ್ನು ಜಾಮಾ ಮಸೀದಿ ಪ್ರತಿಭಟನೆಯ ವೇಳೆ ಬಂಧಿಸಿ 26 ದಿವಸ ಜೈಲಿನಲ್ಲಿಡಲಾಗಿತ್ತು. ನಂತರ ಅವರು ಜಾಮೀನು ಪಡೆದು ಹೊರಬಂದಿದ್ದರು.












