ಸನ್ಮಾರ್ಗ ವಾರ್ತೆ
ಬೆಂಗಳೂರು, ಜ. 20: ಪೌರತ್ವ ತಿದ್ದುಪಡಿ ಕಾನೂನಿನ ಹಕ್ಕುಗಳನ್ನು ಪರಿಗಣಿಸಿ ಬಾಂಗ್ಲಾದೇಶ ವಲಸಿಗಳಾದ ಮತ್ತು ಬೆಂಗಳೂರಿನ ಆರ್ಟಿ ನಗರದಲ್ಲಿ ವಾಸಿಸುವ ಅರ್ಚನಾ ಪೂರ್ಣಿಮಾ ಪ್ರಮಾಣಿಕ್ಗೆ (37) ಕರ್ನಾಟಕ ಹೈಕೋರ್ಟು ಜಾಮೀನು ನೀಡಿದೆ. ಪೂರ್ಣಿಮಾ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ 2002ರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು ಎಂದು ಪಾಸ್ಪೋರ್ಟ್ ಅಥಾರಿಟಿಯ ದೂರಿನಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಕಲಿ ದಾಖಲೆಗಳೊಂದಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಅನ್ನು ಅವರು ಮಾಡಿಸಿಕೊಂಡಿದ್ದರು.
ಪೌರತ್ವ ತಿದ್ದುಪಡಿ ಕಾನೂನು ಪ್ರಕಾರ 2014ಡಿಸೆಂಬರ್ 31 ಅಥವಾ ಅದಕ್ಕಿಂತ ಮೊದಲೇ ಭಾರತದಲ್ಲಿ ವಾಸಿಸುವ ಪಾಕಿಸ್ತಾನಿ, ಬಾಂಗ್ಲಾದೇಶಿ, ಅಫ್ಘಾನಿಸ್ತಾನದ ಹಿಂದೂ, ಸಿಕ್, ಬುದ್ಧ, ಜೈನ, ಪಾರ್ಸಿ , ಕ್ರೈಸ್ತ ಸಮುದಾಯದ ಸದಸ್ಯರನ್ನು ಅನಧಿಕೃತ ವಲಸೆಗಾರರೆಂದು ಪರಿಗಣಿಸುವಂತಿಲ್ಲ ಎಂದು ಕೋರ್ಟು ಹೇಳಿದೆ. 2002ರಲ್ಲಿ ಪತಿ ಮತ್ತು ಮಕ್ಕಳೊಂದಿಗೆ ಅರ್ಚನಾ ಪ್ರಮಾಣಿಕ್ ಭಾರತದಲ್ಲಿ ವಾಸಿಸತೊಡಗಿದ್ದರು.
ಇದೇವೇಳೆ ಅನಧಿಕೃತ ವಲಸೆಗಾರರು ಎಂದು ಕಳೆದವಾರ ಬೆಂಗಳೂರು ಪೊಲೀಸರು ಮರತಹಳ್ಳಿ ಕಾಡುಬಿಸನ ಹಳ್ಳಿಯಲ್ಲಿ 45 ವರ್ಷದ ನರ್ಗಿಸ್ ಎಂಬವರನ್ನು ಬಂಧಿಸಲಾಗಿತ್ತು. ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.












