ಸನ್ಮಾರ್ಗ ವಾರ್ತೆ
ತೃಶೂರ್, ಫೆ.1: ದೇಶದಿಂದ ಹೊರಟು ಹೋಗುವಂತೆ ಬೆದರಿಕೆಯೊಡ್ಡಿ ಸಂಘಪರಿವಾರದ ಕಾರ್ಯಕರ್ತನೊಬ್ಬ ಮುಸ್ಲಿಂ ಗೃಹಿಣಿಗೆ ಹಲ್ಲೆ ನಡೆಸಿದ ಘಟನೆ ತೃಶೂರಿನ ಮಣ್ಣೂತ್ತಿ ಎಂಬಲ್ಲಿ ಗುರುವಾರ ನಡೆದಿದೆ. ಬೆಳಗ್ಗಿನ ವಾಕ್ ಹೊರಟಿದ್ದ ಜಮೀಲಾ ಎಂಬ ಮಹಿಳೆಗೆ ನೆರೆಮನೆಯ ನಿವಾಸಿ ಸಂಘಪರಿವಾರ ಕಾರ್ಯಕರ್ತ ಬಾಬು ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿದ್ದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಬುವನ್ನು ಪೊಲೀಸರು ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದಾರೆ. ನಿಮಗೆ ಇಲ್ಲಿ ವಾಸಕ್ಕೆ ಸ್ಥಳವಿಲ್ಲ . ಭಾರತದಿಂದ ಹೊರಟು ಹೋಗಿ ಎಂದು ಹೇಳಿ ಹೊಡೆದಿದ್ದಾನೆ ಎಂದು ಜಮೀಲಾ ಮಾಧ್ಯಮಗಳಿಗೆ ತಿಳಿಸಿದರು. ಮಹಿಳೆಯ ಸೊಂಟಕ್ಕೆ ತುಳಿದಿದ್ದಾನೆ. ಮುಖಕ್ಕೆ ಹೊಡೆದಿದ್ದಾನೆ. ಮಹಿಳೆ ಬೊಬ್ಬೆ ಹೊಡೆದಾಗ ಊರವರು ಬಂದು ಬಾಬುವಿನ ಹಿಡಿತದಿಂದ ಜಮೀಲಾರನ್ನು ಕಷ್ಟಪಟ್ಟು ಬಿಡಿಸಿದ್ದಾರೆ. ಬಾಬುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಸಂಘಪರಿವಾರದ ಕಾರ್ಯಕರ್ತನಾದ ಬಾಬುವನ್ನು ಪೊಲೀಸರು ಮಾನಸಿಕ ರೋಗಿ ಎಂದು ಚಿತ್ರಿಸುತ್ತಿದ್ದಾರೆ ಎಂದು ಆರೋಪಿ ಮಹಿಳೆಯ ಸಂಬಂಧಿಕರು ಮತ್ತು ಊರವರು ಆರೋಪಿಸಿ ರಂಗಪ್ರವೇಶಿಸಿದ್ದಾರೆ.












