ಮದ್ಯ ನಿಷೇಧಕ್ಕೆ ಒತ್ತಾಯಿಸಿ ಕೃಷ್ಣಾ ನದಿಗಿಳಿದು ಮಹಿಳೆಯರಿಂದ ಜಲ ಸತ್ಯಾಗ್ರಹ; ದೇಹ ತ್ಯಾಗಕ್ಕೂ ಸಿದ್ಧ ಎಂದ ಸ್ವರ್ಣಾ ಭಟ್: ವೀಡಿಯೊ

0
754

ಸನ್ಮಾರ್ಗ ವಾರ್ತೆ

ಫೆ. 1- ಮಧ್ಯಪಾನ ನಿಷೇಧಕ್ಕೆ ಒತ್ತಾಯಿಸಿ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಸಂಗಮೇಶ್ವರ ದೇವಾಲಯದ ಹೊರ ಆವರಣದ ರಥಬೀದಿಯ ಪಕ್ಕದ ಕೃಷ್ಣಾ ನದಿಯಲ್ಲಿ ಮಹಿಳೆಯರು ನಡುಮಟ್ಟದ ನೀರಿಗಿಳಿದು ವಿಭಿನ್ನ ರೀತಿಯ ಪ್ರತಿಭಟನೆಯನ್ನು ನಡೆಸಿದರು.

16 ಜಿಲ್ಲೆಯಿಂದ ಬಂದ 800ಕ್ಕೂ ಅಧಿಕ ಹೋರಾಟಗಾರರು ಈ ಹೋರಾಟದಲ್ಲಿ ಭಾಗಿಯಾಗಿದ್ದು ಬೆಳಿಗ್ಗೆ 9:00 ಗಂಟೆ ಸುಮಾರಿಗೆ 150 ಜನರ ತಂಡ ನಡುಮಟ್ಟದ ನೀರಿಗೆ ಇಳಿದು ಹೋರಾಟ ಆರಂಭಿಸಿತು.

ಹೆಂಡ ಬೇಡ ತುಂಡು ಭೂಮಿ ಬೇಕು; ಬೀರು ಬೇಡ ನೀರು ಬೇಕು; ಅಮಲಿನ ಕೇಂದ್ರ ಬೇಡ ಆರೋಗ್ಯ ಕೇಂದ್ರ ಬೇಕು; ಸಾರಾಯಿ ಬೇಡ ಶಿಕ್ಷಣ ಬೇಕು; ಸಾರಾಯಿ ತೆರಿಗೆ ಕೋಟಿ ಕೋಟಿ, ಬಡವರ ಜೀವನ ಲೂಟಿ ಲೂಟಿ ಎಂದು ಮುಂತಾದ ನಾಮಫಲಕವನ್ನು ಹಿಡಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ಸ್ವರ್ಣ ಭಟ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಧ್ಯಪಾನ ನಿಷೇಧ ಮಾಡಬೇಕು ಮತ್ತು ಸರಕಾರ ನಮ್ಮ ಭೇಟಿಗೆ ಅವಕಾಶ ಮಾಡಿ ಕೊಡಬೇಕು, ಮದ್ಯಪಾನ ನಿಷೇಧಕ್ಕೆ ನೀತಿ ರಚಿಸಬೇಕು ಎಂದು ಆಗ್ರಹಿಸಿ ಜಲ ಸತ್ಯಾಗ್ರಹ ಮಾಡುತ್ತಿದ್ದೇವೆ. ನಮ್ಮ ಹೋರಾಟದ ಕೂಗನ್ನು ಸರಕಾರ ಕೇಳದೆ ಹೋದರೆ ದೇಹ ತ್ಯಾಗಕ್ಕೂ ಸಿದ್ಧ. ನಮ್ಮೊಂದಿಗೆ 54 ಸಂಘಟನೆಗಳಿದ್ದು, ಅವರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಎಚ್ಚರಿಸಿದರು.

ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸದೆ ಹೋದರೆ ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ. ಕುಡಿಸುವ ಕಾರ್ಯ ಮಾಡುತ್ತಿರುವ ಸರಕಾರದ ವಿರುದ್ಧ ದೇಹ ತ್ಯಾಗ ಮಾಡುವುದಕ್ಕೂ ಸಿದ್ಧ ಎಂದವು ಹೇಳಿದರು.

ಈ ಹೋರಾಟದಲ್ಲಿ ಪಾಲ್ಗೊಂಡವರೆಲ್ಲ ಕೂಲಿ ಕಾರ್ಮಿಕರಾಗಿದ್ದು ಅವರಿಗೆ ಯಾವುದೇ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ ನಾಲ್ಕು ದಿನದ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ರಾಜ್ಯದ 40 ಲಕ್ಷ ಮಹಿಳೆಯರಿದ್ದಾರೆ. ನಾವೇ ಮುಂಜಾಗ್ರತೆ ವಹಿಸಿಕೊಂಡು ಜಲ ಸತ್ಯಾಗ್ರಹ ಮಾಡುತ್ತಿದ್ದೇವೆ. ಸರಕಾರ ಮುಂಜಾಗ್ರತೆಯ ವಿಷಯದಲ್ಲಿ ಯಾವುದೇ ನೆರವು ನೀಡಿಲ್ಲ. 30 ಈಜುಗಾರ ಯುವಕರ ತಂಡ ನಮ್ಮೊಂದಿಗೆ ಇದೆ ಎಂದವರು ಹೇಳಿದ್ದಾರೆ.

ಇದೇವೇಳೆ, ನವಜೀವನ ಮಹಿಳಾ ಒಕ್ಕೂಟದ ವಿದ್ಯಾ ಪಾಟೀಲ ಮಾತಾಡಿ, ಬಿಹಾರ ಸರಕಾರವು ಮದ್ಯಪಾನವನ್ನು ನಿಷೇಧಿಸಿದೆ. ಹೀಗಿರುವಾಗ ರಾಜ್ಯ ಸರಕಾರಕ್ಕೆ ಯಾಕೆ ಇದು ಸಾಧ್ಯವಿಲ್ಲ? ಸರಕಾರವು ಮದ್ಯಪಾನದಿಂದ ಬರುವ ಆದಾಯವನ್ನು ನೋಡುತ್ತಿದೆಯೇ ಹೊರತು ಆರೋಗ್ಯವನ್ನಲ್ಲ. ಮದ್ಯದ ಆದಾಯಕ್ಕಿಂತ ಕುಡಿದು ಆರೋಗ್ಯ ಹಾಲು ಮಾಡಿಕೊಂಡವರಿಗಾಗಿ ಸರಕಾರ ಅಧಿಕ ಖರ್ಚು ಮಾಡುತ್ತಿದೆ ಎಂದರು.