‘ನಿಮ್ಮದೇ ತಪ್ಪೊಪ್ಪಿಗೆ’: ತೆರಿಗೆ ಕಡಿತದಿಂದ ವೇತನ ಹೆಚ್ಚಳವಾಗಿಲ್ಲ, ಉದ್ಯೋಗ ಸೃಷ್ಟಿಯಾಗಿಲ್ಲ ಎಂಬ ಮೋದಿ ಹೇಳಿಕೆಗೆ ರಾಹುಲ್ ಗಾಂಧಿ ತಿರುಗೇಟು

0
4

ಸನ್ಮಾರ್ಗ ವಾರ್ತೆ

ಕಾರ್ಪೊರೇಟ್ ನಾಯಕರು ತೆರಿಗೆ ಕಡಿತದ ಲಾಭವನ್ನು ತಮ್ಮ ಉದ್ಯೋಗಿಗಳಿಗೆ ವರ್ಗಾಯಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಹಿಂದೆ ಹೇಳಿದಾಗ, ಅವರು “ತಪ್ಪೊಪ್ಪಿಗೆ” ಮಾಡಿಕೊಂಡಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

ಗುರುವಾರ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಮೋದಿ, 2014 ರಿಂದ ಕಾರ್ಪೊರೇಟ್ ತೆರಿಗೆ ದರವನ್ನು ಶೇ. 30 ರಿಂದ ಶೇ. 22 ಕ್ಕೆ ಇಳಿಸಲಾಗಿದೆ ಎಂದು ಹೇಳಿದ್ದರು. “ಆದರೆ ನೀವು ನಿಮ್ಮ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿದ್ದೀರಾ?” ಎಂದು ಪ್ರಧಾನಿ ಪ್ರಶ್ನಿಸಿದ್ದರು. “ನಿಮ್ಮ ಸಂಸ್ಥೆಗಳಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದ್ದೀರಾ? ಇಲ್ಲ.”

“ನಿಮ್ಮ ಹಸಿವು ತಣಿಯದಂತಹದ್ದಾಗಿರುವುದರಿಂದ, ನಿಮಗೆ ಎಷ್ಟೇ ನೀಡಿದರೂ ಅದು ಎಂದಿಗೂ ಸಾಕಾಗುವುದಿಲ್ಲ” ಎಂಬ ಕಾರಣಕ್ಕೆ ಕಾರ್ಪೊರೇಟ್ ನಾಯಕರು ಹಾಗೆ ಮಾಡಿಲ್ಲ ಎಂದೂ ಅವರು ಸೇರಿಸಿದ್ದರು.

ಶುಕ್ರವಾರ ಮಾತನಾಡಿದ ರಾಹುಲ್‌ ಗಾಂಧಿ, ಮೋದಿ ಅವರ ಹೇಳಿಕೆಗಳು ಕಾರ್ಪೊರೇಟ್ ನಾಯಕರ ವಿರುದ್ಧದ ಆರೋಪಗಳಲ್ಲ, ಬದಲಿಗೆ “ಅವು ನಿಮ್ಮದೇ ತಪ್ಪೊಪ್ಪಿಗೆ” ಎಂದು ಹೇಳಿದ್ದಾರೆ.

ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದ ಕಾಂಗ್ರೆಸ್ ನಾಯಕ, “ಹಸಿದಿರುವವರು ಯಾರು ಎಂಬುದು ಇಡೀ ದೇಶಕ್ಕೆ ತಿಳಿದಿದೆ” ಎಂದರು.

“ವಿಮಾನ ನಿಲ್ದಾಣಗಳು, ಬಂದರುಗಳು, ಗಣಿಗಳು, ಅರಣ್ಯಗಳು, ವಿದ್ಯುತ್, ಕಲ್ಲಿದ್ದಲು, ರಸ್ತೆಗಳು – ಎಲ್ಲವನ್ನೂ ಅವರಿಗೆ ಹಸ್ತಾಂತರಿಸಲಾಗಿದೆ, ಅವರು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ?” ಎಂದು ಪ್ರಶ್ನಿಸಿದರು.

ನೋಟು ಅಮಾನ್ಯೀಕರಣ ಮತ್ತು “ದೋಷಪೂರಿತ” ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೂಲಕ ಮೋದಿ ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂಎಸ್‌ಎಂಇ) “ನಾಶಪಡಿಸಿದ್ದಾರೆ” ಎಂದು ಅವರು ಆರೋಪಿಸಿದರು. ದೊಡ್ಡ ಕಂಪನಿಗಳಿಗೆ ಇದ್ದ ಸಮಾನ ಅವಕಾಶದ ವೇದಿಕೆಯನ್ನು ಭಾರತೀಯ ಜನತಾ ಪಕ್ಷದ ಸರ್ಕಾರ “ಅಳಿಸಿಹಾಕಿದೆ” ಎಂದೂ ಅವರು ಆಪಾದಿಸಿದರು.

“ಏಕಸ್ವಾಮ್ಯವು ಉದ್ಯೋಗಗಳನ್ನು ಸೃಷ್ಟಿಸುವುದಿಲ್ಲ,” ಎಂದು ರಾಹುಕ್‌ ಗಾಂಧಿ ಹೇಳಿದರು. “ಅದು ಬೆಲೆಗಳನ್ನು ಏರಿಸುತ್ತದೆ ಮತ್ತು ಸ್ಪರ್ಧೆಯನ್ನು ನಿವಾರಿಸುತ್ತದೆ. ಮೋದಿ ಜೀ, ನೀವು ಮತ್ತು ನಿಮ್ಮ ಸ್ನೇಹಿತರು ಲೂಟಿ ಮಾಡಿದ್ದೀರಿ—ದೇಶವು ಅದನ್ನು ನೋಡಿದೆ, ಮತ್ತು ಈಗಲೂ ನೋಡುತ್ತಿದೆ.”

ಮೋದಿ ಸರ್ಕಾರವು ಈ ಇಬ್ಬರು ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ರಾಹುಲ್‌ ಗಾಂಧಿ ಪದೇ ಪದೇ ಆರೋಪಿಸುತ್ತಾ ಬಂದಿದ್ದಾರೆ.

ಗುರುವಾರ ಮೋದಿ ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿಯವರು “ತಮ್ಮದೇ ವೈಫಲ್ಯಗಳಿಗೆ ವ್ಯಾಪಾರ ಸಮುದಾಯವನ್ನು ದೂಷಿಸಿದ್ದಾರೆ” ಎಂದು ಹೇಳಿದ್ದಾರೆ.

“…ಮೋದಿ ಸರ್ಕಾರವು ದೇಶದ ಎಲ್ಲಾ ಸಂಪನ್ಮೂಲಗಳನ್ನು ಒಂದೆರಡು ಆಪ್ತ ಬಂಡವಾಳಶಾಹಿಗಳಿಗೆ ಹಸ್ತಾಂತರಿಸಿತು ಮತ್ತು ಎಂಎಸ್‌ಎಂಇಗಳು ಹಾಗೂ ಸಣ್ಣ ವ್ಯಾಪಾರಿಗಳ ಬೆನ್ನೆಲುಬನ್ನು ಮುರಿಯಿತು. ಆರೋಗ್ಯಕರ ಸ್ಪರ್ಧೆಯ ಕೊರತೆಯು ನಾವೀನ್ಯತೆಯನ್ನು ಹತ್ತಿಕ್ಕಿತು, ಉತ್ಪಾದನಾ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿತು ಮತ್ತು ಭಾರತೀಯ ಉತ್ಪನ್ನಗಳ ವಿಶ್ವಾಸಾರ್ಹತೆ ಹಾಗೂ ಜಾಗತಿಕ ಬ್ರಾಂಡ್ ಮೌಲ್ಯವನ್ನು ದುರ್ಬಲಗೊಳಿಸಿತು” ಎಂದು ಖರ್ಗೆ ಹೇಳಿದ್ದಾರೆ.