ಸನ್ಮಾರ್ಗ ವಾರ್ತೆ
ಚೆನ್ನೈ, ಫೆ. 10: ಸಿನೆಮಾ ಉದ್ಯಮ ಕ್ಷೇತ್ರವನ್ನು ರಾಜಕೀಯಗೊಳಿಸುವ ಬಿಜೆಪಿಯ ಯತ್ನವನ್ನು ಫಿಲಂ ಎಂಪ್ಲೋಯಿಸ್ ಫೆಡರೇಶ್ ಆಫ್ ಸೌತ್ ಇಂಡಿಯ (ಪೆಪ್ಸಿ) ಅಧ್ಯಕ್ಷ ಆರ್ ಕೆ ಶೆಲ್ವಮಣಿ ವಿರೋಧಿಸಿದ್ದಾರೆ. ಶೂಟಿಂಗ್ಗೆ ಅಡ್ಡಿಪಡಿಸುವ ಕಾರ್ಯಕ್ರಮವನ್ನು ಬಿಜೆಪಿ ರೂಪಿಸಿದ ಹಿನ್ನೆಲೆಯಲ್ಲಿ ಫೆಫ್ಸಿ ಅಧ್ಯಕ್ಷರು ಈ ಪ್ರತಿಕ್ರಿಯೆ ನೀಡಿದ್ದಾರೆ. ಶೂಟಿಂಗ್ ಲೊಕೇಶನ್ಗೆ ಹೋಗಿ ಆದಾಯ ತೆರಿಗೆ ಅಧಿಕಾರಿಗಳು ನಟ ವಿಜಯ್ರನ್ನು ಕಸ್ಟಡಿಗೆ ಪಡೆದುಕೊಂಡಿದ್ದರು. ರಾಜಕೀಯ ಹಗೆತನ ತಮಿಳು ಸಿನೆಮಾ ಕ್ಷೇತ್ರವನ್ನು ಬಾಧಿಸುತ್ತಿದೆ. ನಟರ ರಾಜಕೀಯ ಅಭಿಪ್ರಾಯ, ರಾಜಕೀಯ ನಿಲುವು ತಪ್ಪಲ್ಲ. ಇದರ ಹೆಸರಿನಲ್ಲಿ ಆಡಳಿತ ನಡೆಸುವವರು ತಮ್ಮ ಸಂಕುಚಿತ ಹಿತಾಸಕ್ತಿಯಂದ ಹಿಂಸಿಸುತ್ತಿದ್ದಾರೆ. ವೈದ್ಯರು ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸಿದರೆ ಆಸ್ಪತ್ರೆಗಳನ್ನು ಪುಡಿಗಟ್ಟುವಿರಾ ಎಂದು ಸೆಲ್ವಮಣಿ ಪ್ರಶ್ನಿಸಿದರು.
ವಿಜಯ್ ಸಿನೆಮಾ ಮಾಸ್ಟರ್ ನ ಶೂಟಿಂಗ್ಗೆ ಹತ್ತು ದಿವಸದ ಅನುಮತಿಯನ್ನು ಪಡೆಯಲಾಗಿತ್ತು. 25 ವರ್ಷಗಳಲ್ಲಿ ಹದಿನಾರು ಸಿನೆಮಾ ಇಲ್ಲಿ ಶೂಟಿಂಗ್ ಆಗಿವೆ. ಸಮಸ್ಯೆಗಳನ್ನು ಮನಗಂಡು ರಜನೀಕಾಂತ್ ,ಅಜಿತ್ ಸಿನೆಮಾಗಳ ಹೆಚ್ಚಿನ ಭಾಗ ಹೊರ ರಾಜ್ಯಗಳಲ್ಲಿ , ವಿದೇಶಗಳಲ್ಲಿ ಚಿತ್ರಿಸಲಾಗುತ್ತಿದೆ. ಇದೇ ವೇಳೆ ವಿಜಯ್ ಸಿನೆಮಾದ ಶೂಟಿಂಗ್ ತಮಿಳ್ನಾಡಿನಲ್ಲಿ ನಡೆಯುತ್ತಿದೆ. ತಮಿಳ್ನಾಡಿನಲ್ಲಿ ಸಿನೆಮಾ ಚಿತ್ರೀಕರಣ ನಡೆದರೆ ಮಾತ್ರ ಇಲ್ಲಿನ ಕಾರ್ಮಿಕರಿಗೆ ಕೆಲಸ ಸಿಗುತ್ತದೆ. ವಿವಿಧ ಸಮಸ್ಯೆಗಳ ಕಾರಣದಿಂದ ಕಳೆದ ಮೂರು ವರ್ಷಗಳಿಂದ ದಕ್ಷಿಣ ಭಾರತ ಸಿನೆಮಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಇದೇವೇಳೆ ಸುರಕ್ಷಿತ ವಲಯವಾದ ಎನ್ಎಲ್ಸಿಯಲ್ಲಿ ಸಿನೆಮಾ ಶೂಟಿಂಗ್ ನಡೆಸುವುದಕ್ಕೆ ಅನುಮತಿ ಕೊಡಬಾರದು ಎಂದು ಬಿಜೆಪಿ ನಾಯಕ ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಆಗ್ರಹಿಸಿದ್ದಾರೆ.












