ಮಂಗಳೂರು ಗುಂಡು ಹಾರಾಟ: ಪೊಲೀಸರನ್ನು ಪುನಃ ತರಾಟೆಗೆತ್ತಿಕೊಂಡ ಹೈಕೋರ್ಟು

0
3592

ಸನ್ಮಾರ್ಗ ವಾರ್ತೆ

ಬೆಂಗಳೂರು, ಫೆ. 25:ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನಾಕಾರರ ಮೇಲೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಗೆ ಸಂಬಂಧಿಸಿದ ದೂರಿನಲ್ಲಿ ಪೊಲೀಸರ ಅಧಿಕ ಹೇಳಿಕೆ(ಎಂಡೋರ್ಸ್‍ಮೆಂಟ್) ಹಿಂಪಡೆಯಬೇಕೆಂದು ಕರ್ನಾಟಕ ಹೈಕೋರ್ಟು ಆಗ್ರಹಿಸಿದೆ. ಪ್ರಥಮ ಮಾಹಿತಿ ವರದಿ ಪ್ರಕಾರ ಇಂತಹ ಹೇಳಿಕೆಗಳನ್ನು ಫೈಲ್ ಮಾಡುವುದು ಪೊಲೀಸರ ಅಧಿಕಾರವನ್ನು ಮೀರಿದ್ದು ಎಂದು ಜಸ್ಟಿಸ್ ಅಭಯ್ ಶ್ರೀನಿವಾಸ್ ಓಖ, ಜಸ್ಟಿಸ್ ಹೇಮಂತ್ ಚಂದನ ಗೌಡರ್ ಅವರನ್ನೊಳಗೊಂಡ ಹೈಕೋರ್ಟು ಪೀಠ ಬೆಟ್ಟುಮಾಡಿತು. ಇದಕ್ಕೆ ಸಂಬಂಧಿಸಿದ ವರದಿಯನ್ನು ಮಾರ್ಚ್ 24ರೊಳಗೆ ಸಲ್ಲಿಸಬೇಕೆಂದು ಮಂಗಳೂರು ಜಿಲ್ಲಾ ಡೆಪ್ಯುಟಿ ಕಮಿಶನರ್ ಗೆ ಕೋರ್ಟು ಸೂಚಿಸಿದೆ. ಒಂದೇ ಘಟನೆಯಲ್ಲಿ ಹಲವು ಎಫ್‍ಐಆರ್ ದಾಖಲಿಸಲು ಆಗುವುದಿಲ್ಲ ಎಂದು ಕರ್ನಾಟಕ ಪೊಲೀಸರಿಗೆ ಕೋರ್ಟು ನೆನಪಿಸಿತು.

ಮಂಗಳೂರು ಪ್ರತಿಭಟನೆಗೆ ಸಂಬಂಧಿಸಿ ಬಂಧಿಲಾದ ಉಡುಪಿ, ದಕ್ಷಿಣ ಕನ್ನಡದ 21 ಮಂದಿಗೆ ಹೈಕೋರ್ಟು ಕಳೆದವಾರ ಜಾಮೀನು ನೀಡಿತ್ತು. ಡಿಸೆಂಬರ್ 19ಕ್ಕೆ ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಗೋಲಿಬಾರು ಸಹಿತ ಅತಿಕ್ರಮಗಳನ್ನು ಅಡಗಿಸಿಡಲು ಪ್ರಜ್ಞಾಪೂರ್ವಕ ಯತ್ನ ನಡೆದಿದೆ. ಪಕ್ಷಪಾತ ಮತ್ತು ಮೋಸದ ತನೀಖೆ ನಡೆದಿದೆ ಎಂದು ಕೋರ್ಟು ಜಾಮೀನು ಆದೇಶದಲ್ಲಿ ಬೆಟ್ಟುಮಾಡಿದೆ.

ಇಬ್ಬರನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಾಳುಗಳು ಮತ್ತು ಕೊಲೆಯಾದವರ ಸಂಬಂಧಿಕರು ಸಲ್ಲಿಸಿದ ದೂರಿನಲ್ಲಿ ಒಂದು ಕೇಸನ್ನೂ ಪೊಲೀಸರು ದಾಖಲಿಸಿಲ್ಲ ಎಂದು ಕೋರ್ಟು ಪೊಲೀಸರ ವರ್ತನೆಯನ್ನು ಟೀಕಿಸಿದೆ.