ದಿಲ್ಲಿಯಲ್ಲಿ ಹಿಂಸಾಚಾರ: ಧರ್ಮವನ್ನು ಕೇಳಿ ಸ್ಪಷ್ಟಪಡಿಸಿಕೊಂಡ ಬಳಿಕ ಹಲ್ಲೆ

0
2156

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 25: ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನಾಕಾರರ ಮೇಲೆ ಧರ್ಮವನ್ನು ಕೇಳಿ ಸ್ಪಷ್ಟಪಡಿಸಿಕೊಂಡ ಬಳಿಕ ಹಲ್ಲೆ ನಡೆಸಲಾಗಿದೆ ಎಂದು ಗಾಯಾಳುಗಳ ಸಂಬಂಧಿಕರು ತಿಳಿಸಿದ್ದಾರೆ. ಪೊಲೀಸರು ದಾಳಿ ಮಾಡುವುದನ್ನು ನೋಡುತ್ತ ನಿಂತರು. ಗಾಯಾಳುಗಳನ್ನು ಕರೆದುಕೊಂಡು ಹೋದ ಆಂಬುಲೆನ್ಸ್ ಗೂ ಕಲ್ಲೆಸೆಯಲಾಗಿದೆ. ಪೊಲೀಸರು ದುಷ್ಕರ್ಮಿಗಳಿಗೆ ಸಹಕರಿಸಿದ್ದಾರೆ ಎಂಬ ಟೀಕೆಯೂ ಕೇಳಿ ಬಂದಿದೆ.

ದುಷ್ಕರ್ಮಿಯನ್ನು ಗುರುತಿಸಲಾಗಿದೆ:

ಪೌರತ್ವ ತಿದ್ದು ಪಡಿ ಕಾನೂನು ವಿರುದ್ಧ ಪ್ರತಿಭಟಿಸಿದವರ ಮೇಲೆ ಗುಂಡು ಹಾರಿಸಿದ ವ್ಯಕ್ತಿಯನ್ನು ಗುರುತಿಸಲಾಗಿದೆ. ಶಾರೂಕ್ ಎಂಬಾತ ಗುಂಡು ಹಾರಿಸಿದ್ದೆಂದು ದಿಲ್ಲಿ ಪೊಲೀಸರು ತಿಳಿಸಿದರೆಂದು ಎಎನ್‍ಐ ವರದಿ ಮಾಡಿದೆ. ಪ್ರತಿಭಟನೆಯ ನಡುವೆ ಗುಂಡು ತಗುಲಿದ ಪೊಲೀಸ್ ಹೆಡ್‍ಕಾನ್ಸಟೇಬಲ್ ಮತ್ತು ಕಲ್ಲೆಸೆತದಲ್ಲಿ ಗಾಯಗೊಂಡ ನಾಲ್ವರು ಪ್ರತಿಭಟನಾಕಾರರು ಮೃತಪಟ್ಟರು. ಗಾಯಾಳುಗಳಲ್ಲಿ ಹತ್ತು ಪೊಲೀಸರು ಮತ್ತು 56 ಪ್ರತಿಭಟನಾಕಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಿಲ್ಲಿಯಲ್ಲಿ ನಿಷೇಧಾಜ್ಞೆ:

ಸಂಘರ್ಷ ಸಾಧ್ಯತೆಯನ್ನು ಗಮನಿಸಿ ದಿಲ್ಲಿಯ ಹತ್ತು ಕಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ದಿಲ್ಲಿ ಪೊಲೀಸ್ ಕಮಿಶನರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಸೇರಿ ಪರಿಸ್ಥಿತಿಯ ಅವಲೋಕನ ನಡೆಸಲಾಯಿತು.

ಸೇನೆಯ ನಿಯೋಜನೆ:

ಹಿಂಸಾಚಾರ ನಡೆದ ಖಜೂರಿ ಖಾಸ್‍ನಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಲಾಗಿದೆ. ಪ್ರದೇಶದಲ್ಲಿ ಶಾಂತಿ ಮರುಸ್ಥಾಪನೆಗೆ ಹೆಚ್ಚು ಸೇನೆಯನ್ನು ನಿಯೋಜಿಸಲಾಗುವುದು ಎಂದು ಕೇಂದ್ರ ಗೃಹ ಸಹಸಚಿವ ಜಿ.ಕಿಶನ್ ರೆಡ್ಡಿ ಹೇಳಿದರು.

ಉಪರಾಜ್ಯಪಾಲರ ಮನೆಗೆ ಮುತ್ತಿಗೆ:

ಶಾಂತಿ ಮರುಸ್ಥಾಪಿಸಲು ಮಧ್ಯಪ್ರವೇಶಿಸಲಿಲ್ಲ ಎಂದು ಆಮ್ ಆದ್ಮಿಪಾರ್ಟಿ ಶಾಸಕರು, ಸಚಿವರು ಉಪರಾಜ್ಯಪಾಲರ ಮನೆಗೆ ಗೆರಾವ್ ಮಾಡಿದ್ದಾರೆ. ಹಿಂಸಾಚಾರ ಕೊನೆಗೊಳಿಸಲು ಪೊಲೀಸರು ಕ್ರಮ ಜರಗಿಸಿಲ್ಲ ಎಂದು ಎಎಪಿ ಉಪರಾಜ್ಯಪಾಲರ ಮನೆಗೆ ಮುತ್ತಿಗೆ ಹಾಕಿದೆ.

ಶಾಲೆಗಳಿಗೆ ರಜೆ:

ಪೂರ್ವ ದಿಲ್ಲಿಯಲ್ಲಿ ಪ್ರತಿಭಟನೆ ತೀವ್ರಗೊಂಡ ಈಶಾನ್ಯ ದಿಲ್ಲಿಯಲ್ಲಿ ಸರಕಾರಿ_ಖಾಸಗಿ ಶಾಲೆಗಳಿಗೆ ಇಂದು ರಜೆ ಘೋಷಿಸಿಲಾಗಿದೆ. ಘರ್ಷಣೆ ಸಾಧ್ಯತೆಯನ್ನು ಪರಿಗಣಿಸಿ ಶಾಲೆಗಳಿಗೆ ರಜೆ ನೀಡಲು ಆದೇಶ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಷ್ ಸಿಸೊಡಿಯ ತಿಳಿಸಿದರು. ಸಿಬಿಎಸ್‍ಇ ಪರೀಕ್ಷೆ ದಿನಾಂಕ ಬದಲಾಯಿಸಲು ಅವರು ಮನವಿ ಮಾಡಿದ್ದಾರೆ. ಈಶಾನ್ಯ ದಿಲ್ಲಿಯಲ್ಲಿ ಪರೀಕ್ಷಾ ಕೇಂದ್ರಗಳಿಲ್ಲ. ಪಶ್ಚಿಮ ದಿಲ್ಲಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಿಬಿಎಸ್‍ಇ ವಕ್ತಾರ ರಮೇಶ್ ಶರ್ಮ ತಿಳಿಸಿದ್ದಾರೆ.

ಮೆಟ್ರೋ ನಿಲ್ದಾಣ ಬಂದ್:

ಘರ್ಷಣೆಯ ಹಿನ್ನೆಲೆಯಲ್ಲಿ ದಿಲ್ಲಿಯ ಪ್ರಧಾನ ಸ್ಥಳಗಳ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ದಿಲ್ಲಿ ಪೊಲೀಸ್ ಕೇಂದ್ರ ಕಚೇರಿ ಸಮೀಪದ ಮೆಟ್ರೋ ನಿಲ್ದಾಣವನ್ನು ಮುಚ್ಚಲಾಗಿದೆ. ಜಾಫರಾಬಾದ್, ಮೌಜ್‍ಪುರ, ಬಬರ್ಪುರ್, ಗೊಕುಲಪುರಿ, ಜೊಹ್ರಿ ಎನ್‍ಕ್ಲೇವ್, ಶಿವ್ ವಿಹಾರ ನಿಲ್ದಾಣಗಳನ್ನು ಮುಚ್ಚಲಾಗಿದೆ.