ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 26: ಪೌರತ್ವ ತಿದ್ದುಪಡಿ ಕಾನೂನು ಪ್ರತಿಭಟನಾಕಾರರ ಮೇಲೆ ನಡೆದ ಹಿಂಸಾಚಾರ ಘಟನೆಗೆ ಸಂಬಂಧಿಸಿದ ವರದಿಯನ್ನು ನೀಡಬೇಕೆಂದು ದಿಲ್ಲಿ ಪೊಲೀಸ್ ಕಮಿಶನರ್ ಗೆ ಹೈಕೋರ್ಟು ನೋಟಿಸು ನೀಡಿದೆ. ಹಿಂಸಾಚಾರದ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಸಲ್ಲಿಸಲಾದ ಅರ್ಜಿಯಲ್ಲಿ ಕೋರ್ಟು ನೋಟಿಸು ಕಳುಹಿಸಿದೆ. ಯಥಾಸ್ಥಿತಿ ವರದಿ ಸಲ್ಲಿಸಲು ಕಮಿಶನರಿಗೆ ಕೋರ್ಟು ಸೂಚಿಸಿದೆ. ಪ್ರಕರಣ ಪುನಃ ಇಂದೇ ಪರಿಗಣನೆಗೆ ಬರಲಿದೆ. ಗಲಭೆಗೆ ಕರೆ ನೀಡಿದ ಬಿಜೆಪಿಯ ನಾಯಕ ಮಾಜಿ ಶಾಸಕ ಕಪಿಲ್ ಮಿಶ್ರ ಮುಂತಾದವರ ವಿರುದ್ಧ ಎಫ್ ಐಆರ್ ದಾಖಲಿಸಬೇಕು. ಹಿಂಸಾಚಾರ ಘಟನೆಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಂಗ ತನಿಖೆ, ಬಲಿಪಶುಗಳಿಗೆ ನಷ್ಟಪರಿಹಾರಕ್ಕೂ ಆದೇಶ ಹೊರಡಿಸಬೇಕು ಎಂದು ನಿನ್ನೆ ಹೈಕೋರ್ಟಿನಲ್ಲಿ ಅರ್ಜಿ ದಾಖಲಾಗಿತ್ತು. ಇಂದು ಮಧ್ಯಾಹ್ನ ಈ ಅರ್ಜಿ ವಿಚಾರಣೆಗೆ ಬರಲಿದೆ. ಹೈಕೋರ್ಟು ನಿನ್ನೆ ರಾತ್ರೆ ಇನ್ನೊಂದು ಅರ್ಜಿಯನ್ನು ವಿಚಾರಣೆ ನಡೆಸಿದ್ದು ಗಾಯಾಳುಗಳಿಗೆ ಕೂಡಲೇ ತುರ್ತು ಚಿಕಿತ್ಸೆ ಲಭ್ಯಗೊಳಿಸಬೇಕೆಂದು ಆದೇಶಿಸಿತ್ತು.
ಗಾಯಾಳುಗಳನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆತರಬೇಕೆಂದು ಕೂಡ ಕೋರ್ಟು ಹೇಳಿತ್ತು. ದಿಲ್ಲಿ ಹಿಂಸಾಚಾರ ತೀವ್ರಗೊಂಡದ್ದರಿಂದ ಜಸ್ಟಿಸ್ ಎಸ್. ಮುರಳೀಧರನ್ರ ಮನೆಯಲ್ಲಿ ಮಧ್ಯರಾತ್ರೆ ವಾದ ಆಲಿಸಲಾಗಿತ್ತು. ಜಸ್ಟಿಸ್ ಎಸ್ ಮುರಳೀಧರ್, ಅನೂಪ್ ಜೆ. ಬಂಬನಾನಿ ಅವರನ್ನೊಳಗೊಂಡ ಹೈಕೋಟು ಪೀಠ ಜನರ ಸುರಕ್ಷೆ ಖಚಿತಪಡಿಸಬೇಕು ಮತ್ತು ಹೆಚ್ಚುವರಿ ಸೇನೆ ನಿಯೋಜಿಸಬೇಕೆಂದು ಪೊಲೀಸರಿಗೆ ಆದೇಶಿಸಿತ್ತು. ಮಾತ್ರವಲ್ಲ ಗಾಯಾಳುಗಳ ಚಿಕಿತ್ಸಾ ವಿವರಗಳನ್ನೊಳಗೊಂಡ ವಿವರವಾದ ವರದಿಯನ್ನೂ ಪೊಲೀಸರಿಂದ ಕೇಳಿತ್ತು.












