ಸನ್ಮಾರ್ಗ ವಾರ್ತೆ
ಬೆಂಗಳೂರು, ಫೆ. 26: ಸಂಶೋಧನೆ ಮುಂತಾದುವುಗಳಿಗೆ ವಿದೇಶಿ ಫಂಡ್ ಸ್ವೀಕರಿಸಲಾಗಿದೆ ಎಂದು ಮಣಿಪಾಲ ಅಕಾಡಮಿ ಆಫ್ ಹಯರ್ ಎಜುಕೇಶನ್ನ ಲೈಸನ್ಸನ್ನು ಕೇಂದ್ರ ಗೃಹ ಸಚಿವಾಲಯ ಅಮಾನತುಗೊಳಿಸಿದೆ. ನಿಫಾ ವೈರಸ್ಗೆ ಸಂಬಂಧಿಸಿ ಮಣಿಪಾಲ ವೈರಾಲಜಿ ಇನ್ಸಿಟಿಟ್ಯೂಟ್ ಅನುಮತಿಯಿಲ್ಲದೆ ಸಂಶೋಧನೆ ನಡೆಸಿತ್ತು ಎಂಬ ಆರೋಪದಲ್ಲಿ ಕೇಂದ್ರ ಸರಕಾರ ಈ ಕ್ರಮ ಜರಗಿಸಿದೆ.
ಆದರೆ ನಿಫಾ ವೈರಸ್ ಸ್ಯಾಂಪಲ್ಗಳನ್ನು ಪರೀಕ್ಷಿಸಲು ಕೇಂದ್ರ ಆರೋಗ್ಯ ಸಚಿವಾಲಯ ಅನುಮತಿ ನೀಡಿತ್ತೆಂದು, ಈಗಿನ ಆರೋಪಗಳು ನಿರಾಧಾರ ಎಂದು ಮಣಿಪಾಲ್ ಅಕಾಡಮಿ ಆಫ್ ಹಯರ್ ಎಜುಕೇಶನ್ ಅಧೀನ ಇನ್ಸಿಟಿಟ್ಯೂಟ್ ಆಫ್ ವೈರಲಾಜಿ ಲ್ಯಾಬ್ ಅಧಿಕಾರಿಗಳು ತಿಳಿಸಿದ್ದಾರೆ.
ನಿಫಾ ವೈರಸ್ ಪರೀಕ್ಷೆಗೆ ವಿದೇಶಿ ಫಂಡ್ ಸ್ವೀಕರಿಸಲಾಗಿದೆ ಎಂಬ ಆರೋಪದಲ್ಲಿ 2020 ಜನವರಿಯಲ್ಲಿ ಮಣಿಪಾಲ್ ಎಜುಕೇಶನ್ನ ಎಫ್ಸಿಆರ್ಐ ಖಾತೆ ಅಮಾನತುಗೊಳಿಸಿತ್ತು. ಇದನ್ನು ಬೆಟ್ಟುಮಾಡಿ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ ಪತ್ರಕ್ಕೆ ಉತ್ತರವನ್ನು ಕಾಯುತ್ತಿದ್ದೇವೆ ಎಂದು ವೈರಲಾಜಿ ಇನ್ಸಿಟಿಟ್ಯೂಟ್ ಅಧಿಕಾರಿಗಳು ಮಾಧ್ಯಮಗಳಿಗೆ ವಿವರಿಸಿದ್ದಾರೆ. ಈ ವಿಷಯದಲ್ಲಿ ಸಾಕಷ್ಟು ವಿವರಣೆ ಕೇಳದೆ ಏಕಪಕ್ಷೀಯವಾಗಿ ಲೈಸೆನ್ಸ್ ಅಮಾನುತುಗೊಳಿಸಲಾಗಿದೆ ಎಂದು ಅಧಿಕಾರಿ ಆರೋಪಿಸಿದ್ದಾರೆ.
2018ರಲ್ಲಿ ಕೇರಳದಲ್ಲಿ ನಿಫಾ ವೈರಸ್ ಬಾಧೆ ಕಂಡು ಬಂದಿತ್ತು. ಇದನ್ನು ಮಣಿಪಾಲ್ ವೈರಲಾಜಿ ಲ್ಯಾಬ್ ಕಂಡು ಹುಡುಕಿತ್ತು. ಇದೇ ಲ್ಯಾಬ್ ವಿರುದ್ಧ ಈಗ ಕೇಂದ್ರ ಕ್ರಮ ಕೈಗೊಂಡಿದೆ. ವೈರಸ್ ದೃಢೀಕರಿಸುವ ಅಧಿಕೃತ ಲ್ಯಾಬ್ಗಳ ಪಟ್ಟಿಯಲ್ಲಿ ಮಣಿಪಾಲ್ ಲ್ಯಾಬ್ ಇತ್ತು. ನಂತರ 2019ರಲ್ಲಿ ನಿಫಾ ಮಾರ್ಗದರ್ಶಿ ದಾಖಲೆಯಿಂದ ಲ್ಯಾಬನ್ನು ಕೈಬಿಡಲಾಗಿದೆ.












