ಸನ್ಮಾರ್ಗ ವಾರ್ತೆ
ಮಸ್ಕತ್, ಫೆ. 27:ಒಮನ್ನಲ್ಲಿ ಪುನಃ ಇಬ್ಬರಿಗೆ ಕೊರೊನಾ ವೈರಸ್ ತಗಲಿದ್ದು ದೃಢವಾಗಿದೆ. 250ಕ್ಕೂ ಹೆಚ್ಚು ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ವಿವಿಧ ದೇಶದಿಂದ ಬಂದವರು ನಿರೀಕ್ಷಣೆಯಲ್ಲಿದ್ದಾರೆ. ಕೊರೊನಾ ಪೀಡಿತ ದೇಶಗಳಿಂದ ಬಂದವರು ಇಲ್ಲಿರುವ ಅವರ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ. ಆರೋಗ್ಯ ಸಚಿವಾಲಯ ಮತ್ತು ಕಾಲ್ಸೆಂಟರ್ ಸಂಪರ್ಕಿಸಿ ರೋಗ ಪ್ರತಿರೋಧಕ ಕ್ರಮಗಳಿಗೆ ಒಳಗಾಗಬೇಕೆಂದು ಸರಕಾರ ಸೂಚಿಸಿದೆ. ಇರಾನಿಂದ ಬರುವ ಹೋಗುವ ಎಲ್ಲ ವಿಮಾನ ಯಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕುವೈಟ್ಸಿಟಿ: ಕುವೈಟ್ನಲ್ಲಿಯೂ ಕೊರೊನಾ ದಾಂಧಲೆ ಮುಂದುವರಿದಿದೆ. ಬುಧವಾರ 17 ಮಂದಿಗೆ ಕೊರಾನ ಇರುವುದು ದೃಢಪಟ್ಟಿದೆ. ಹೀಗೆ ಕುವೈಟ್ನಲ್ಲಿ ಕೊರೊನಾ ಪೀಡಿತರ ಸಂಖ್ಯೆ 26 ಆಗಿದ್ದು ಇರಾನಿಂದ ಬಂದ ವಿಮಾನ ಯಾತ್ರಿಕರಲ್ಲಿ ಮಾತ್ರ ಕೊರೊನಾ ಕಂಡು ಬಂದಿದೆ ಎಂದು ಕುವೈಟ್ ಆರೋಗ್ಯ ಸಚಿವಾಲಯ ತಿಳಿಸಿದೆ. ಇರಾನ್ನಲ್ಲಿ ವೈರಸ್ ಹರಡಿದ್ದರಿಂದ ಅಲ್ಲಿಂದ ಬಂದ ಪ್ರಜೆಗಳನ್ನು ಪುನಃ ಇರಾನ್ಗೆ ಕಳುಹಿಸಿಕೊಡಲಾಗಿದೆ. ಐದು ವಿಮಾನಗಳಲ್ಲಿ 700 ಮಂದಿ ಇರಾನ್ನಿಂದ ಬಂದಿದ್ದರು. ಅವರನ್ನು ಪುನಃ ಇರಾನ್ಗೆ ಕಳುಹಿಸಿಕೊಡಲಾಗಿದೆ. ಬಹಳಷ್ಟು ಜಾಗಗಳಿಗೆ ವಿಮಾನ ಯಾನವನ್ನು ಕುವೈಟ್ ಕೂಡ ನಿಲ್ಲಿಸಿದೆ. ಇರಾಕ್, ಇಟಲಿ, ಜಪಾನ್, ದಕ್ಷಿಣ ಕೊರಿಯ, ತಾಯ್ಲೆಂಡ್, ಸಿಂಗಾಪುರ, ಹಾಂಕಾಂಗ್, ಚೀನಗಳಿಗೆ ವಿಮಾನಗಳು ರದ್ದಾಗಿವೆ.
ಮನಾಮ: ಬಹ್ರೈನ್ನಲ್ಲಿ ಹೊಸದಾಗಿ ಮೂರು ಮಂದಿಗೆ ಕೊರೊನಾ ವೈರಸ್ ಕಂಡು ಬಂದಿದೆ. ಇದರೊಂದಿಗೆ 26 ಮಂದಿಗೆ ಕೊರೊನಾ ವೈರಸ್ ಇರುವುದು ದೃಢಗೊಂಡಿದ್ದು ಇರಾನಿನಿಂದ ಬಂದ ಮೂವರು ಮಹಿಳೆಯರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇರಾನಿಗೆ ತಾತ್ಕಾಲಿಕವಾಗಿ ವಿಮಾನ ಸರ್ವಿಸ್ ರದ್ದುಪಡಿಸಲಾಗಿದೆ. ಗಲ್ಫ್ ಹೆಲ್ತ್ ಕೌನ್ಸಿಲ್ ಮತ್ತು ವಿಶ್ವ ಆರೋಗ್ಯ ಸಂಘಟನೆಯ ಮಾರ್ಗದರ್ಶನದಂತೆ ರೋಗ ಹರಡದಂತೆ ತಡೆಯಲು ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬಹ್ರೈನ್ ಆರೋಗ್ಯ ಸಚಿವಾಲಯ ತಿಳಿಸಿದೆ.












