ಸನ್ಮಾರ್ಗ ವಾರ್ತೆ
ವಾಷಿಂಗ್ಟನ್/ಹೊಸದಿಲ್ಲಿ, ಫೆ. 28: ದಿಲ್ಲಿ ಗಲಭೆಯ ಕುರಿತು ತೀವ್ರ ಆತಂಕವನ್ನು ಜಾಗತಿಕ ರಾಷ್ಟ್ರಗಳು ವ್ಯಕ್ತಪಡಿಸಿವೆ. ಜನರ ಗುಂಪು ದಾಳಿಗಳಿಂದ ಮುಸ್ಲಿಮರು, ದುರ್ಬಲ ವಿಭಾಗಗಳನ್ನು ರಕ್ಷಿಸಲು ಭಾರತ ಸರಕಾರ ಗಂಭೀರವಾಗಿ ಪ್ರಯತ್ನಿಸಬೇಕು ಎಂದು ಧಾರ್ಮಿಕ ಸ್ವಾತಂತ್ರ್ಯದ ಅಮೆರಿಕ ಏಜೆನ್ಸಿ ಆಗ್ರಹಿಸಿದೆ. ಮುಸ್ಲಿಮರ ವಸತಿ, ಮಸೀದಿಗೆ ನಡೆದ ಭಯಾನಕ ದಾಳಿಯನ್ನು ಖಂಡಿಸುವುದಾಗಿ ಇಸ್ಲಾಮಿಕ್ ದೇಶಗಳ ಮೈತ್ರಿಕೂಟ ಒಐಸಿ ತಿಳಿಸಿದೆ. ಗಲಭೆಗಳಲ್ಲಿ ಮೃತಪಟ್ಟವರಿಗೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟಾನಿಯೊ ಗುಟರೆಸ್ ಸಂತಾಪ ಸೂಚಿಸಿದ್ದಾರೆ. ಹಿಂಸಾಚಾರ ತಡೆಯುವಲ್ಲಿ ದಿಲ್ಲಿ ಪೊಲೀಸ್ ಬೇಜವಾಬ್ದಾರಿಯಿಂದ ವರ್ತಿಸಿದೆ ಎಂದು ಅಮೆರಿಕ ಮಾನವ ಹಕ್ಕು ಕಮಿಶನ್ ಅಧ್ಯಕ್ಷ ಮಿಶೆಲ್ ಬಾಚ್ಚೇಲ ಆತಂಕ ವ್ಯಕ್ತಪಡಿಸಿದ್ದಾರೆ.
ತನ್ನದೇ ಪ್ರಜೆಗಳು ದಾಳಿಗೊಳಗಾದಂತೆ ರಕ್ಷಿಸಲು ಭಾರತ ಸರಕಾರ ತಯಾರಿರಬೇಕೆಂದು ಧಾರ್ಮಿಕ ಸ್ವಾತಂತ್ರ್ಯಕ್ಕಿರುವ ಅಮೆರಿಕದ ಆಯೋಗ ಯುಎಸ್ಸಿಐಆರ್ಎಫ್ ಅಧ್ಯಕ್ಷ ಟೋನಿ ಪರ್ಕಿನ್ಸ್ ಆಗ್ರಹಿಸಿದರು. ಮುಸ್ಲಿಮರ ಮನೆ, ಅಂಗಡಿ, ಆರಾಧಾನಾಲಯಗಳನ್ನು ಧ್ವಂಸ ಮಾಡಿದ್ದು ತುಂಬ ಗಂಭೀರ ವಿಚಾರ. ಅತ್ಯಂತ ಕ್ರೂರ, ಅನಿಯಂತ್ರಿತ ದಾಳಿಗಳಿಗೆ ಅವಕಾಶ ಕೊಡಬಾರದೆಂದು ಸಿಐಆರೆಫ್ ಕಮಿಶನರ್ ಅರುಣಿಮ ಭಾರ್ಗವ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ದಿಲ್ಲಿಯಲ್ಲಿ ಮುಸ್ಲಿಂ ವಿರೋಧಿ ಗಲಭೆ ನಡೆದಿದೆ. ಅದಕ್ಕೆ ಕಾರಣಕರ್ತರನ್ನು ಕಾನೂನಿನ ಮುಂದೆ ತರಬೇಕೆಂದು ಒಐಸಿ ಆಗ್ರಹಿಸಿದೆ. ಅತ್ಯಂತ ನೀಚದಾಳಿ ದಿಲ್ಲಿಯಲ್ಲಿ ನಡೆಯಿತು. ಮುಸ್ಲಿಂ ಪ್ರಜೆಗಳ ಸುರಕ್ಷೆ ದೃಢಪಡಿಸಬೇಕು, ಆರಾಧಾನಾಲಯಗಳಿಗೆ ರಕ್ಷಣೆ ಕೊಡಬೇಕೆಂದು ಒಐಸಿ ಮೋದಿ ಸರಕಾರಕ್ಕೆ ಮನವಿ ಮಾಡಿದೆ.
ಭಾರತದ ರಾಜಧಾನಿಯಲ್ಲಿ ನಡೆದ ಮುಸ್ಲಿಮರ ಸಾಮೂಹಿಕ ಹತ್ಯೆಯನ್ನು ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಖಂಡಿಸಿದ್ದಾರೆ. ಇದೇವೇಳೆ, ಒಐಸಿ ಹೇಳಿಕೆ ಅಪಕ್ವ, ತಪ್ಪುಕಲ್ಪನೆಗಳಿಂದ ಕೂಡಿದ್ದೆಂದು ಭಾರತ ಪ್ರತಿಕ್ರಿಯಿಸಿದೆ. ಜನರಲ್ಲಿ ಆತ್ಮ ವಿಶ್ವಾಸ ಮೂಡಿಲು ಮತ್ತು ಸಾಮಾನ್ಯ ಪರಿಸ್ಥಿತಿ ತರಲು ಶ್ರಮಿಸಲಾಗುತ್ತಿದೆ. ಇದೇ ವೇಳೆ ಒಐಸಿಯಂತಹ ಸಂಘಟನೆ ಬೇಜವಾಬ್ದಾರಿ ಹೇಳಿಕೆ ನೀಡಬಾರದೆಂದು ವಿದೇಶ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಆಗ್ರಹಿಸಿದ್ದಾರೆ.












