ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 29: ಕೃತಜ್ಞತೆಗಳು, ವಿಚಾರಣೆ ಬೇಗ ಮಾಡಿ ಎಂದು ಕನ್ಹಯ್ಯ ಕುಮಾರ್ ತನ್ನ ವಿರುದ್ಧ ದೇಶದ್ರೋಹ ಆರೋಪದಲ್ಲಿ ವಿಚಾರಣೆ ನಡೆಸಲು ದಿಲ್ಲಿ ಸರಕಾರ ಪೊಲೀಸರಿಗೆ ಅನುಮತಿ ನೀಡಿದ್ದಕ್ಕೆ ಹೀಗೆ ಪ್ರತಿಕ್ರಿಯಿಸಿದ್ದಾರೆ. ಕನ್ಹಯ್ಯಾ ಕುಮಾರ್ ಸಿಪಿಐ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅನುಮತಿ ನೀಡಿದ ಸಮಯ ನೋಡಿ. ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಬೆಗುಸರಾಯ್ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಾದಾಗ ಆರೋಪಪಟ್ಟಿ ಸಲ್ಲಿಸಲಾಯಿತು. ಈಗ ತಾನು ಈ ವರ್ಷ ನಡೆಯುವ ಬಿಹಾರ ವಿಧಾನಸಭಾ ಚುನವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದೇನೆ. ರಾಜಕೀಯ ಲಾಭಕ್ಕಾಗಿ ದೇಶದ್ರೋಹ ಪ್ರಕರಣವನ್ನು ದುರಪಯೋಗಿಸುತ್ತಿದ್ದಾರೆ ಎಂದು ದೇಶ ತಿಳಿಯಬೇಕು. ಹಿಝ್ಬುಲ್ ಮುಜಾಹಿದೀನ್ ಭಯೋತ್ಪಾದಕರೊಂದಿಗೆ ಬಂಧಿಸಲಾದ ಜಮ್ಮು ಕಾಶ್ಮೀರ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ವಿರುದ್ಧ ದೇಶದ್ರೋಹ ಆರೋಪ ಹೊರಿಸಲಾಗಿಲ್ಲ ಎಂಬುದನ್ನು ನಾವು ನೆನೆಯ ಬೇಕೆಂದು ಕನ್ಹಯ್ಯಾ ಕುಮಾರ್ ಹೇಳಿದರು. ಜೆಎನ್ಯು ಮಾಜಿ ಅಧ್ಯಕ್ಷರೂ ಆಗಿರುವ ಕನ್ಹಯ್ಯಾ ಮತ್ತು ಇತರ ಇಬ್ಬರ ಮೇಲೆ ದೇಶದ್ರೋಹ ಆರೋಪದಲ್ಲಿ ವಿಚಾರಣೆ ನಡೆಸಲು ಶುಕ್ರವಾರ ದಿಲ್ಲಿ ಸರಕಾರ ಪೊಲೀಸರಿಗೆ ಅನುಮತಿ ನೀಡಿತ್ತು. ಉಮರ್ ಖಾಲಿದ್, ಅನಿರ್ಬನ್, ಅಖಿಬ್ ಹುಸೈನ್, ಮುಜೀಬ್, ಅಮರ್ಗುಲ್ ಬಶ್ರತ್ ಅಲಿ, ಖಾಲಿದ್ ಬಾಸಿರ್ ಪ್ರಕರಣದಲ್ಲಿರುವ ಇತರ ವಿದ್ಯಾರ್ಥಿಗಳು.
ಜೆಎನ್ಯು ಕ್ಯಾಂಪಸ್ಸಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ್ರೋಹ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ 2016ರಲ್ಲಿ ವಸಂತ್ ಕುಂಜ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ತನಿಖೆಗೆ ಆಮ್ ಆದ್ಮಿಪಾರ್ಟಿ ಸರಕಾರ ಅನುಮತಿ ನೀಡಿದ್ದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಅತೀ ಬೇಗನೆ ಕೋರ್ಟಿನಲ್ಲಿ ವಿಚಾರಣೆ ನಡೆಯಲಿ. ಈ ಪ್ರಕರಣದಲ್ಲಿ ಕೋರ್ಟಿನಿಂದ ತೀರ್ಪು ಬರಬೇಕಾಗಿದೆ. ಟಿವಿ ಕೋಣೆ ವಿಚಾರಣೆಯಿಂದಲ್ಲ ಎಂದು ಕನ್ಹಯ್ಯ ಕುಮಾರ್ ಹೇಳಿದರು.












