ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ.17: ಮಾಜಿ ಚೀಫ್ ಜಸ್ಟಿಸ್ ರಂಜನ್ ಗೊಗೊಯಿಯವರನ್ನು ಕೇಂದ್ರ ಸರಕಾರ ರಾಜ್ಯಸಭೆಗೆ ನಾಮಾಂಕಿತಗೊಳಿಸಿದೆ. ನವೆಂಬರಿನಲ್ಲಿ ಅವರು ನಿವೃತ್ತರಾಗಿದ್ದರು. ನಾಮನಿರ್ದೇಶಿತ ರಾಜ್ಯಸಭಾ ಸದಸ್ಯ ಕೆಟಿಎಸ್ ತುಳಸಿ ನಿವೃತ್ತರಾದ ಸ್ಥಾನಕ್ಕೆ ಗೊಗೊಯಿಯವರನ್ನು ರಾಷ್ಟ್ರಪತಿ ನೇಮಕಗೊಳಿಸಿದರು ಎಂದು ಗೃಹ ಸಚಿವಾಲಯದ ಆದೇಶ ತಿಳಿಸಿದೆ. ಕಳೆದ ನವೆಂಬರಿನಲ್ಲಿ ಬಾಬರಿ ಮಸೀದಿ ವಿವಾದ ಪ್ರಕರಣದ ಗೊಗೊಯಿ ಅಧ್ಯಕ್ಷತೆಯ ಸುಪ್ರೀಂಕೋರ್ಟು ತೀರ್ಪು ನೀಡಿತ್ತು. ಶಬರಿಮಲೆ ಮಹಿಳೆ ಪ್ರವೇಶ, ರಫೇಲ್ ಯುದ್ಧ ವಿಮಾನ ವ್ಯವಹಾರ ಇತ್ಯಾದಿ ಪ್ರಕರಣದಲ್ಲಿ ಗೊಗೊಯಿ ನೇತೃತ್ವದ ಪೀಠ ತೀರ್ಪು ನೀಡಿತ್ತು. ಗೊಗೊಯಿ ಸಹಿತ ಸುಪ್ರೀಂಕೋರ್ಟಿನ ನಾಲ್ವರು ನ್ಯಾಯಾಧೀಶರುಗಳು ಅಂದಿನ ಚೀಫ್ ಜಸ್ಟಿಸ್ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದು ದೊಡ್ಡ ವಿವಾದವಾಗಿತ್ತು.
ಪ್ರಕರಣಗಳನ್ನುವಿಭಜಿಸುವ ಕುರಿತು ಅಂದು ಈ ನ್ಯಾಯಾಧೀಶರು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದರು. ಗೊಗೊಯಿ ಅಸ್ಸಾಮಿನವರು. ಗುವಾಹಟಿ ಹೈಕೋರ್ಟಿನ ಜಡ್ಜ್ ಆಗಿದ್ದರು. ಪಂಜಾಬ್ ಹರಿಯಾಣ ಹೈಕೋರ್ಟಿನ ಚೀಫ್ ಜಡ್ಜ್ ಆಗಿಡ್ಡರು. 2012ರಲ್ಲಿ ಸುಪ್ರೀಂಕೋರ್ಟಿಗೆ ಬಂದರು. 2019 ನವೆಂಬರ್ 17ಕ್ಕೆ ನಿವೃತ್ತರಾದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪರ- ವಿರೋಧ ಚರ್ಚೆಗಳಾಗುತ್ತಿವೆ. ಅವರು ಪ್ರಧಾನಿ ಮೋದಿ ಜೊತೆ ಮಾತಾಡುವ ಚಿತ್ರಗಳ ಸಹಿತ ಅವರ ನಿಲುವುಗಳ ಬಗ್ಗೆ ವಿಮರ್ಶೆಗಳಾಗುತ್ತಿವೆ.












