ಗೋಮೂತ್ರದಿಂದ ಕ್ಯಾನ್ಸರ್ ಗುಣವಾಗಬಲ್ಲುದು, ವಜ್ರಾಸನದಿಂದ ನನ್ನ ಮಂಡಿನೋವು ಗುಣವಾಗಿದೆ- ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್

0
1215

ಸನ್ಮಾರ್ಗ ವಾರ್ತೆ

ನವದೆಹಲಿ; ಮಾ. 19- ಗೋಮೂತ್ರದ ನಿಯಮಿತ ಸೇವನೆಯು ಕ್ಯಾನ್ಸರನ್ನು ಗುಣಪಡಿಸಬಲ್ಲುದು ಎಂದು ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರು ಬುಧವಾರ ರಾಜ್ಯಸಭೆಯಲ್ಲಿ ಪ್ರತಿಪಾದಿಸುವ ಮೂಲಕ ಕಾಂಗ್ರೆಸ್ಸನ್ನು ಮುಜುಗರಕ್ಕೆ ಸಿಲುಕಿಸಿದರು.

ಈ ಹಿಂದೆ ನಾನು ಮೀರತ್ ನ ಆಶ್ರಮವೊಂದಕ್ಕೆ ಭೇಟಿ ನೀಡಿದ್ದೆ. ಆಗ ಅಲ್ಲಿನ ವ್ಯಕ್ತಿಯೊಬ್ಬರು ಗೋಮೂತ್ರವನ್ನು ನಿಯಮಿತವಾಗಿ ಸೇವಿಸುವ ಮೂಲಕ ಕ್ಯಾನ್ಸರ್ ನಿಂದ ಸಂಪೂರ್ಣ ಗುಣ ಹೊಂದಿದ್ದನ್ನು ನನಗೆ ತಿಳಿಸಿದರು. ಅನೇಕ ಆರೋಗ್ಯ ಸಮಸ್ಯೆಗಳಿಗೆ ಭಾರತೀಯ ವೈದ್ಯ ಪದ್ಧತಿಯಲ್ಲಿ ಪರಿಹಾರ ಇದೆ. ಒಂದು ರೀತಿಯಲ್ಲಿ ನಾನೇ ಅದಕ್ಕೆ ಉದಾಹರಣೆಯಾಗಿದ್ದೇನೆ. ಮಂಡಿ ಚಿಪ್ಪು ಬದಲಿಸಬೇಕೆಂದು ವೈದ್ಯರು ನನಗೆ ಸಲಹೆ ನೀಡಿದ್ದರು. ಆದರೆ ನಾನದನ್ನು ನಿರಾಕರಿಸಿ ಯೋಗಾಭ್ಯಾಸ ಆರಂಭಿಸಿದೆ. ವಜ್ರಾಸನ ದಿಂದ ನೋವು ಕಡಿಮೆಯಾಯಿತು ಎಂದು ಅವರು ವಿವರಿಸಿದರು.

ಹೋಮಿಯೋಪತಿ ಮತ್ತು ಭಾರತೀಯ ವೈದ್ಯ ಪದ್ಧತಿ ಗಳಿಗಾಗಿ ರಾಷ್ಟ್ರೀಯ ಆಯೋಗವನ್ನು ರಚಿಸುವ ವಿಧೇಯಕದ ಮೇಲೆ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ವೇಳೆ ಅವರು ಈ ವಿವರವನ್ನು ನೀಡಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿವರಿಗೆ ಮಂಡಿ ಶಸ್ತ್ರಚಿಕಿತ್ಸೆ ಮಾಡಿದ್ದು ನನಗೆ ಆ ಬಳಿಕ ತಿಳಿಯಿತು. ಈ ಶಸ್ತ್ರ ಚಿಕಿತ್ಸೆಯ ಕುರಿತು ಮೊದಲೇ ನನಗೆ ತಿಳಿದಿರುತ್ತಿದ್ದರೆ, ನಾನು ಖಂಡಿತವಾಗಿಯೂ ‘ವಜ್ರಾಸನ್ ಅನ್ನು ಅನುಸರಿಸಲು ಹೇಳುತ್ತಿದ್ದೆ ಮತ್ತು ಅದರಿಂದಾಗಿ ಅವರು ಗುಣಹೊಂದುತ್ತಿದ್ದರು ಎಂದು ಅವರು ಹೇಳಿದರು. ಅಮೆರಿಕಾದಲ್ಲಿ ಸುಮಾರು 104 ವರ್ಷ ವಯಸ್ಸಿನ ವ್ಯಕ್ತಿಯನ್ನು ಭೇಟಿಯಾಗಿದ್ದೇನೆ ಮತ್ತು ಯುವಕನಂತೆ ನಡೆದಾಡುವುದನ್ನು ನೋಡಿದ್ದೇನೆ ಎಂದು ಅವರು ಹೇಳಿದರು.

ಯೋಗ ನಮ್ಮ ಸಂಪತ್ತು. ನೀವು ಯೋಗವನ್ನು ಅಭ್ಯಾಸ ಮಾಡಿದರೆ, ನಮ್ಮ ಆರೋಗ್ಯದ ಬಜೆಟ್ ವೆಚ್ಚವನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದು. ಇದು ಜೀವನ ವಿಧಾನ ಎಂದವರು ಅವರು ಹೇಳಿದರು.