ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 18: ಎನ್ಪಿಆರ್ ನಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿ ಲೇಖಕರು, ಸ್ವಯಂಸೇವಾ ಕಾರ್ಯಕರ್ತರು, ರೈತರನ್ನೊಳಗೊಂಡ ಸಾವಿರ ಮಹಿಳೆಯರ ಸಹಿ ಇರುವ ಪತ್ರವನ್ನು ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲಾಗಿದೆ. 2021ರ ಸೆನ್ಸಸ್ ಜೊತೆಗೆ ಎಪ್ರಿಲ್ನಲ್ಲಿ ಎನ್ಪಿಆರ್ ಜಾರಿಗೊಳಿಸಬಾರದೆಂದು ಪತ್ರದಲ್ಲಿ ಆಗ್ರಹಿಸಿದ್ದೇವೆ ಎಂದು ಪ್ರಮುಖ ಮಹಿಳಾ ಕಾರ್ಯಕರ್ತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಹಿಳೆಯರಿಗೆ ಸ್ವಂತ ಊರು, ವಿಳಾಸ, ಜನನಸ್ಥಳ ತಿಳಿಸುವ ದಾಖಲೆಗಳು ಕೆಲವೊಮ್ಮೆ ನಮ್ಮ ಬಳಿ ಇರುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಆನಿರಾಜ ಹೇಳಿದರು. ಅಸಂಖ್ಯ ಮಹಿಳೆಯರು ಮದುವೆಯಾಗಿ ತವರು ಮನೆಗೆ ದಾಖಲೆಗಳಿಲ್ಲದೇ ಬಂದಿರುತ್ತಾರೆ. ಅಸ್ಸಾಮಿನ ಪೌರತ್ವ ಪಟ್ಟಿಯಿಂದ ಹೊರಗಾದ ಹತ್ತೊಂಬತ್ತು ಲಕ್ಷ ಜನರಲ್ಲಿ ಹೆಚ್ಚಿನ ಭಾಗ ಮಹಿಳೆಯರು ಎಂದು ಆನಿರಾಜ ತಿಳಿಸಿದರು. ಜಾತಿ, ಧರ್ಮ ವ್ಯತ್ಯಾಸವಿಲ್ಲದೆ ಎಲ್ಲ ವಿಭಾಗದ ಮಹಿಳೆಯರಿಗೂ ಇದು ಬಾಧಕವಾಗುತ್ತದೆ ಎಂದು ಫರಾ ನಕ್ವಿ ಹೇಳಿದರು. ಅಂಜಲಿ ಭಾರದ್ವಾಜ್, ವಾಣಿ ಸುಬ್ರಹ್ಮಣ್ಯನ್, ಮೀರ ಸಂಗಮಿತ್ರ, ಮರಿಯಂ ಧಾವ್ಲೆ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದರು.












